Search


ಎಲ್ಲೇ ಸಮಸ್ಯೆಯಾದರು ನಾನು ಬರ್ತೀನಿ, ಗಣೇಶೋತ್ಸವಕ್ಕೆ ತೊಂದರೆ ಮಾಡಿದ್ರೆ ಹುಷಾರ್; ಆರ್. ಅಶೋಕ್ ಎಚ್ಚರಿಕೆ

ಬೆಂಗಳೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ವಿಧಿಸಿರುವ ಹಲವು ನಿರ್ಬಂಧಗಳ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣೇಶೋತ್ಸವಕ್ಕೆ ಎಲ್ಲೆಡೆ ತೊಂದರೆ ಉಂಟಾದರೂ ತಾವು ಸ್ಥಳಕ್ಕೆ ಬಂದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. “ಹಿಂದೂಗಳ ತಂಟೆಗೆ ಹೋದರೆ ಹುಷಾರ್” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಗಣೇಶೋತ್ಸವ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ರಾಜ್ಯದಾದ್ಯಂತ ಸರ್ಕಾರದ ವತಿಯಿಂದ ಗಣೇಶೋತ್ಸವಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ ಅವರು, ಟಿ. ನರಸೀಪುರದ ಇನ್ಸ್‌ಪೆಕ್ಟರ್ ಧನಂಜಯ್ ನೀಡಿರುವ ಎಚ್ಚರಿಕೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದಕ್ಕೆ ಸರ್ಕಾರದ ಕುಮ್ಮಕ್ಕು ಇರಬಹುದು ಎಂದು ಆರೋಪಿಸಿದರು.

ಟಿ. ನರಸೀಪುರದ ಇನ್ಸ್‌ಪೆಕ್ಟರ್ ಧನಂಜಯ್ ಅವರು ದುರಹಂಕಾರದಿಂದ ಮಾತನಾಡಿದ್ದಾರೆ ಎಂದು ಆಕ್ಷೇಪಿಸಿದ ಅಶೋಕ್, ಮಸೀದಿ ಮುಂದೆ ಗಣೇಶೋತ್ಸವ ಮೆರವಣಿಗೆ ನಡೆಸುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಎಂಬ ನಿರ್ಬಂಧಗಳ ಬಗ್ಗೆ ಪ್ರಶ್ನೆ ಎತ್ತಿದರು. “ನೀವೇನು ರೌಡಿನಾ? ಗ್ರಹಚಾರ ಬಿಡಿಸೋಕೆ ಮಾತನಾಡುತ್ತಿದ್ದೀರಾ? ಮೆರವಣಿಗೆ ಮಾಡುವವರನ್ನೇನು ರೌಡಿಗಳೆಂದು ಭಾವಿಸಿದ್ದೀರಾ?” ಎಂದು ಅವರು ಕಿಡಿಕಾರಿದರು.

ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ಅಶೋಕ್, ಚುನಾವಣೆ ಬಂದಾಗ ದೇವಸ್ಥಾನಗಳಿಗೆ ತೆರಳಿ ಕುಂಕುಮ ಧರಿಸಿ, ನದಿಯಲ್ಲಿ ಮುಳುಗಿ ತಾವು ದೊಡ್ಡ ಹಿಂದೂ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು. “ಇದೇನಾ ನಿಮ್ಮ ಹಿಂದೂ ಕಾಳಜಿ? ಭಕ್ತರಿಗೆ ಧಮಕಿ ಹಾಕುವುದೇ ಕರ್ನಾಟಕದ ಮಾಡೆಲ್? ಚುನಾವಣೆ ಬಂದಾಗ ಮಾತ್ರ ಕಪಟ ಹಿಂದುತ್ವ ತೋರಿಸುತ್ತೀರಾ?” ಎಂದು ಪ್ರಶ್ನಿಸಿದರು.

By Ravikumar - 13-09-2026


Ads in Post