ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ನೀರಾವರಿ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ ʻಕುಮಾರಸ್ವಾಮಿ ಹೇಳಿಕೆಯಿಂದ ಕೆರಳಿರುವ ಚೆಲುವರಾಯಸ್ವಾಮಿ, ಗುಂಡಿಗೆ ಇದ್ದರೆ ನನ್ನ ಜೊತೆಗೆ ಕುಮಾರಸ್ವಾಮಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದು, ಅನೇಕ ವಿಚಾರಗಳನ್ನ ಉಲ್ಲೇಖಿಸಿ ಟೀಕೆ ಮಾಡಿದ್ದಾರೆ.
ರಾತ್ರಿ 9 ಗಂಟೆಗೆ ಹೋಗಿ ಯಾರ ಮನೆ ಬಾಗಿಲು ಬಡಿದರು ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ʻ ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ನನ್ನ ಜತೆ ಕುಮಾರಸ್ವಾಮಿ ಚರ್ಚೆಗೆ ಬರಲಿ. ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎರಡು ದಿನ ಎಲ್ಲಿಗೆ ಹೋಗಿದ್ರು? ಆಗ ಅವರ ತಂದೆ ದೇವೇಗೌಡರು ಅಧಿವೇಶನ ಪ್ರಾರಂಭ ಆಗೋ ಮುನ್ನ 10 ಗಂಟೆ ಒಳಗೆ ಕರೆದುಕೊಂಡು ಬಾ ಅಂತ ನನಗೆ ಟಾಸ್ಕ್ ಕೊಟ್ಟಿದ್ದರು. ಎಲ್ಲಿಗೆ ಹೋಗಿದ್ರು ಕುಮಾರಸ್ವಾಮಿ? ಅವರ ಬಾಗಿಲು ತಟ್ಟಿದ್ದು ನಾನು. ಅದು ತಪ್ಪು ಅಂದರೆ ಕುಮಾರಸ್ವಾಮಿ ಮಾತಾಡಲಿ. ಎರಡು ದಿನ ಕುಮಾರಸ್ವಾಮಿ ಎಲ್ಲಿ ಕಾಣೆ ಆಗಿದ್ದರು? ಅಂತ ಆರೋಪ ಮಾಡಿದರು.
ಮುಂದುವರಿದು ಮಾತನಾಡಿದ ಚೆಲುವರಾಯಸ್ವಾಮಿ ʻ ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಮಾತಾಡೋಕೆ ಏನು ಇಲ್ಲ, ಆದರೆ ಅವರ ಬಗ್ಗೆ ನನ್ನ ಬಳಿ ಸಾವಿರ ವಿಷಯಗಳಿವೆ. ದೆಹಲಿಯಲ್ಲಿ ಕುಡಿಯೋ ನೀರಿನ ಕುರಿತು ಜಲಶಕ್ತಿ ಸಚಿವರ ಸಭೆಗಾಗಿ ನಾನು ಹೋಗಿದ್ದೆ, ಕೇಂದ್ರ ಕ್ಯಾಬಿನೆಟ್ ಮಂತ್ರಿಯಾಗಿರೋ ಕುಮಾರಸ್ವಾಮಿಗೆ ಅದು ಕೂಡ ಗೊತ್ತಿಲ್ಲ, ವಾರಕ್ಕೆ ಮೂರು ದಿನ ರಾಜ್ಯದಲ್ಲೇ ಇರ್ತಾರೆ, ಮಾಜಿ ಸಿಎಂ ಆದವರು ಈ ರೀತಿ ಮಾತಾಡ್ತಾರಾ. ಅವರಿಗೆ ಧೈರ್ಯವಿದ್ದರೆ ನನ್ನ ಜೊತೆ ಚರ್ಚೆ ಮಾಡಲಿ, ಅವರು ಹೇಳೋ ಟಿವಿ ಚಾನಲ್ನಲ್ಲಿ ಈ ಕುರಿತು ಚರ್ಚೆಗೆ ಸಿದ್ದ ಎಂದು ಚೆಲುವರಾಯಸ್ವಾಮಿ ಸವಾಲು ಹಾಕಿದರು.
ರಾತ್ರಿ ಯಾರ ಮನೆ ಬಾಗಿಲು ಬಡಿಯೋಕೆ ಹೋಗಿದ್ರು ಅಂತಾರೆ. ಗೌರವವಾಗಿ ಕುಮಾರಸ್ವಾಮಿ ಮಾತಾಡಿಲಿ. ನಾಲಿಗೆ ಹಿಡತ ಹಿಡಿದು ಮಾತಾಡಲಿ. ಬಾಯಿಗೆ ಬಂದ ಹಾಗೆ ಮಾತಾಡಿದ್ರೆ ನಾನು ಮಾತಾಡಬೇಕಾಗುತ್ತದೆ. ದೆಹಲಿಗೆ ನೀರು ಬಿಡೋಕೆ ಹೋಗ್ತಾರಾ. ಯಾವ ವಿಚಾರ ಎಲ್ಲಿ ಮಾತಾಡಬೇಕು ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಕೇಂದ್ರದ ಮಂತ್ರಿ ಆಗಿ ಮಂತ್ರಿ ಕೆಲಸ ಮಾಡಲಿ. ಅದನ್ನ ಬಿಟ್ಟು ಕರ್ನಾಟಕದಲ್ಲಿ ಪ್ರೆಸ್ ಮೀಟ್ ಮಾಡಿ ಟೀಕೆ ಮಾಡ್ತಾರೆ. ಕುಮಾರಸ್ವಾಮಿಗೆ ಡಿಕೆಶಿ ಸಿಎಂ ಆಗಿದ್ದು ತಡೆಯೋಕೆ ಆಗೊಲ್ಲ. ಅವರಿಗೆ ಹೊಟ್ಟೆ ನೋವು ಇದ್ದರೆ ನಾವು ಔಷಧಿ ಕೊಡೋಕೆ ಆಗೊಲ್ಲ. ಯಾರ್ ಯಾರ್ ಟೈಂ ನೀರು ಬಿಟ್ಟಿದ್ದಾರೆ ಅಂತ ದಾಖಲಾತಿ ಬಿಡು ಅಂದರೆ ಬಿಡ್ತೀವಿ. ಕುಮಾರಸ್ವಾಮಿ, ದೇವೇಗೌಡರ ಅವಧಿಯಲ್ಲಿ ಎಷ್ಟು ನೀರು ಬಿಡಲಾಗಿತ್ತು ದಾಖಲೆ ಕೊಡ್ತೀನಿ ಅಂತ ಸವಾಲ್ ಹಾಕಿದ್ರು.
ನಾವು ಸರಿಯಾಗಿ ಸುಪ್ರೀಂಕೋರ್ಟ್, CWRC ಮುಂದೆ ವಾದ ಮಾಡಿಯೇ ಇಷ್ಟು ನೀರು ಉಳಿದಿರೋದು. ನಮ್ಮ ರೈತರ ಪರವಾಗಿ ಕೆಲಸ ಮಾಡ್ತಾ ಇದ್ದೇವೆ. ಎಲ್ಲಾ ಸರ್ಕಾರದಲ್ಲಿ ಈ ವ್ಯವಸ್ಥೆ ಇದೆ. ಬಾಗಿಲು ತಟ್ಟೋಕೆ ಶುರು ಮಾಡಿದ್ದು ನಾನು ಹೇಳೋಕೆ ಶುರು ಮಾಡಿದ್ರೆ ತಡೆದುಕೊಳ್ಳೋಕೆ ಆದ್ರೆ ಮಾತಾಡಿ. ಅವರಿಗೆ ತಡೆದುಕೊಳ್ಳೋ ಶಕ್ತಿ ಇದ್ದರೆ ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಲಿ ಅಂತ ಸವಾಲ್ ಹಾಕಿದರು.