ಲಖನೌ: 1947ರ ದೇಶ ವಿಭಜನೆ ವಿಚಾರವನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘1947ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ದೇಶದ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಭಾರತದ ಮೇಲೆ ಯಾರೂ ಹಾನಿ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿಭಜನೆಯ ಹೊಣೆಯನ್ನು ಕಾಂಗ್ರೆಸ್ ನಾಯಕತ್ವದ ಮೇಲೆ ಹೊರಿಸಿದ ಅವರು, ಅಧಿಕಾರದ ಮೇಲಿನ ಆಸೆಯಿಂದಾಗಿ ದೇಶ ವಿಭಜನೆಗೆ ದಾರಿ ಮಾಡಿಕೊಡಲಾಯಿತು ಎಂದು ಆರೋಪಿಸಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ನಾಯಕರು ಪ್ರಧಾನಿಯಾಗಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ ಎಂದೂ ಹೇಳಿದ್ದಾರೆ.
ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಅಪಾರ ಪ್ರಮಾಣದ ಜನರ ಸಂಕಷ್ಟವನ್ನು ಸ್ಮರಿಸಿದ ಯೋಗಿ, ಇತಿಹಾಸದ ಘಟನೆಗಳಿಂದ ದೇಶ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ. ಆಗಸ್ಟ್ 14ರಂದು ದೇಶಾದ್ಯಂತ ‘ವಿಭಜನೆಯ ಭೀಕರತೆಯ ಸ್ಮರಣಾ ದಿನ’ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಯೋಗಿ ಅವರ ಈ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.