Search


ಸರಿಯಾಗಿ ಗಡಿ ರಕ್ಷಣೆ ಮಾಡಿದ್ರೆ ಬಾಂಗ್ಲಾದವರು ಯಾಕೆ ಒಳಗೆ ಬರ್ತಾರೆ; ಬಿಜೆಪಿ ವಿರುದ್ಧ ಸಿಡಿದೆದ್ದ ಖರ್ಗೆ

ಬೆಂಗಳೂರು: ಬಾಂಗ್ಲಾ ಅಕ್ರಮ ವಲಸಿಗರಿಗೆ ರಾಜ್ಯ ಸರ್ಕಾರ ರಕ್ಷಣೆ ಕೊಡ್ತಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದು 'ಬಾಂಗ್ಲಾದೇಶದ ಅಕ್ರಮ ವಲಸಿಗರು ಬೆಂಗಳೂರಿಗೆ ಬಂದಿದ್ದು ಹೇಗೆ, ದೇಶದ ಅಂತರರಾಷ್ಟ್ರೀಯ ಗಡಿಯನ್ನು ರಕ್ಷಿಸಲು ಸಾಧ್ಯವಾಗದವರು ಈಗ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಾಂಗ್ಲಾದೇಶಿಗರಿಗೆ ಪ್ರಮಾಣಪತ್ರ ನೀಡುತ್ತಿದ್ದೇವೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ನನ್ನ ಪ್ರಶ್ನೆ ಏನೆಂದರೆ, ಬಾಂಗ್ಲಾದೇಶದವರು ಬೆಂಗಳೂರಿಗೆ ಹೇಗೆ ಬರುತ್ತಿದ್ದಾರೆ, ಅಂತರರಾಷ್ಟ್ರೀಯ ಗಡಿಯನ್ನು ಕಾಯುವುದು ಯಾರ ಜವಾಬ್ದಾರಿ, ಕರ್ನಾಟಕ ಸರ್ಕಾರದ್ದೋ ಅಥವಾ ಕೇಂದ್ರ ಸರ್ಕಾರದ್ದೋ," ಎಂದು ಪ್ರಶ್ನಿಸಿದರು.

ಇದೇ ವೇಳೆ ಅಕ್ರಮ ವಲಸಿಗರಿಗೆ ಕರ್ನಾಟಕ ಸರ್ಕಾರ ಯಾವುದೇ ಸಂದರ್ಭದಲ್ಲೂ ಶಾಶ್ವತ ನಿವಾಸ ಪ್ರಮಾಣಪತ್ರ (PRC) ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಗಡಿ ಭದ್ರತೆ ಸಂಪೂರ್ಣವಾಗಿ ಕೇಂದ್ರದ ಜವಾಬ್ದಾರಿಯಾಗಿದ್ದು, ಅದರಲ್ಲಿ ವೈಫಲ್ಯ ಕಂಡುಬಂದರೆ ಅದರ ಹೊಣೆಯನ್ನು ರಾಜ್ಯದ ಮೇಲೆ ಹೊರಿಸುವುದು ಸರಿಯಲ್ಲ ಎಂದು ಹೇಳಿದರು. ನಾವು ಜವಾಬ್ದಾರಿಯುತ ಸರ್ಕಾರ. ಅಕ್ರಮವಾಗಿ ದೇಶಕ್ಕೆ ಬಂದಿರುವ ಯಾವುದೇ ವಿದೇಶಿ ಪ್ರಜೆಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದಿಲ್ಲ. ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನಾವು ಕೈಗೊಂಡಿರುವ ಕ್ರಮಗಳಲ್ಲಿ ಯಾವುದೇ ಲೋಪ ಕಂಡುಹಿಡಿಯಲು ಸಾಧ್ಯವಾಗದ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. "ಪ್ರತಿದಿನ ಬಾಂಗ್ಲಾದೇಶದವರು ದೇಶಕ್ಕೆ ಬರುತ್ತಿದ್ದಾರೆ ಎಂದು ಹೇಳುತ್ತಿರುವುದು ಬಿಜೆಪಿಯೇ. ಉತ್ತರ ಪ್ರದೇಶದಲ್ಲಿ, ಕರ್ನಾಟಕದಲ್ಲಿ, ಪಶ್ಚಿಮ ಬಂಗಾಳದಲ್ಲಿ ಇದೇ ಮಾತನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ ಅಂತರರಾಷ್ಟ್ರೀಯ ಗಡಿಯನ್ನು ರಕ್ಷಿಸುವ ಹೊಣೆ ಯಾರದು? ಕರ್ನಾಟಕಕ್ಕೆ ಯಾವುದೇ ದೇಶದೊಂದಿಗೆ ಅಂತರರಾಷ್ಟ್ರೀಯ ಗಡಿ ಇದೆಯೇ? ಅಕ್ರಮ ವಲಸಿಗರು ದೇಶದೊಳಗೆ ಹೇಗೆ ಪ್ರವೇಶಿಸುತ್ತಿದ್ದಾರೆ ಎಂಬುದಕ್ಕೆ ಮೊದಲು ಕೇಂದ್ರ ಸರ್ಕಾರ ಉತ್ತರಿಸಬೇಕು," ಎಂದು ಹೇಳಿದರು.

By Ravikumar - 12-07-2026


Ads in Post