Search


ನೈಸ್ ಯೋಜನೆ ನನ್ನ ಕೂಸಾದರೆ, ಹೆರಿಗೆ ಮಾಡಿಸಿದ ಸೂಲಗಿತ್ತಿ ಯಾರು; ದೇವೇಗೌಡರ ಖಡಕ್ ಮಾತು

ಹಾಸನ: ನೈಸ್ (NICE) ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವಾಕ್ಸಮರಕ್ಕೆ ಇದೀಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಎಂಟ್ರಿ ನೀಡಿದ್ದಾರೆ.

ನೈಸ್ ಯೋಜನೆ ಕುಮಾರಸ್ವಾಮಿ ಅಥವಾ ದೇವೇಗೌಡರ ಕೂಸು ಎಂದು ಟೀಕಿಸುವವರು, ಆ ಯೋಜನೆಗೆ ಜನ್ಮ ನೀಡಿದ ‘ಸೂಲಗಿತ್ತಿ’ ಯಾರು ಎಂಬುದನ್ನೂ ಹೇಳಬೇಕು ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೈಸ್ ಯೋಜನೆ, ಎಸ್‌ಐಆರ್ ವಿವಾದ, ಕಾಂಗ್ರೆಸ್ ನಾಯಕರ ಪ್ರಚಾರ ಶೈಲಿ ಹಾಗೂ ತಮ್ಮ ಮುಂದಿನ ರಾಜಕೀಯ ಚಟುವಟಿಕೆಗಳ ಕುರಿತು ಮಾತನಾಡಿದರು.

1992ರಲ್ಲಿ ಆರ್ಥಿಕ ಸುಧಾರಣೆಗಳ ಸಂದರ್ಭದಲ್ಲಿ ನಡೆದ ಒಪ್ಪಂದವನ್ನು ಸ್ಮರಿಸಿದ ದೇವೇಗೌಡರು, ಅಮೆರಿಕದ ಕಂಪನಿ ಸೇರಿದಂತೆ ಮೂರು ಸಂಸ್ಥೆಗಳು ಸೇರಿ ಮಾಡಿಕೊಂಡ ಎಂಒಯುಗೆ ತಾನು ಸಹಿ ಹಾಕಿದ್ದಷ್ಟೇ. ಬಳಿಕ ದೆಹಲಿ ರಾಜಕಾರಣಕ್ಕೆ ತೆರಳಿದ್ದು, ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು. ನೈಸ್ ಆಸ್ತಿ ವಿಚಾರದಲ್ಲಿ ಎಷ್ಟೇ ಪ್ರಯತ್ನಿಸಿದರೂ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ತಾವು ಸಾಯಬಹುದು, ಆದರೆ ತಾವು ಮಾಡಿದ ಕೆಲಸಗಳನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ತಮ್ಮ ಆರೋಗ್ಯದ ಬಗ್ಗೆಯೂ ಮಾತನಾಡಿದ 93 ವರ್ಷದ ದೇವೇಗೌಡರು, ತನಗೆ ಕಿಡ್ನಿ ಸಮಸ್ಯೆ ಇರುವುದೇನೂ ರಹಸ್ಯವಲ್ಲ. ಆದರೆ ಡಯಾಲಿಸಿಸ್ ಆಗುತ್ತಿರುವುದು ಕಿಡ್ನಿಗೆ ಮಾತ್ರ, ಬ್ರೇನ್‌ಗೆ ಅಲ್ಲ; ತನ್ನ ಮೆದುಳು ಇನ್ನೂ ಪಕ್ಕಾ ಆಗಿದೆ ಎಂದು ಹಾಸ್ಯಭರಿತವಾಗಿ ಹೇಳಿದರು. ಈ ಬಾರಿ ಪಿತೃಪಕ್ಷದ ಕಾರ್ಯಕ್ರಮಗಳನ್ನು ತಮ್ಮ ಸ್ವಗ್ರಾಮ ಹರದನಹಳ್ಳಿಯಲ್ಲೇ ನಾಲ್ವರು ಗಂಡುಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಸೇರಿ ನೆರವೇರಿಸುವುದಾಗಿ ತಿಳಿಸಿದ ಅವರು, ಪಿತೃಪಕ್ಷ ಮುಗಿದ ಬಳಿಕ ರಾಜಕೀಯದಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದರು.

By Ravikumar - 07-10-2026


Ads in Post