Search


ಟ್ರಾಫಿಕ್‌ ಫೈನ್‌ ಕಟ್ಟದಿದ್ರೆ ವಿದ್ಯುತ್‌ ಬಿಲ್‌ಗೆ ಸೇರಿಸಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸಲಹೆ

ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸಿ ವಿಧಿಸಲಾಗಿರುವ ದಂಡದ ಮೊತ್ತವನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಬಾಕಿ ಉಳಿದಿರುವ ಟ್ರಾಫಿಕ್‌ ಇ-ಚಲನ್‌ಗಳ ದಂಡವನ್ನು ವಿದ್ಯುತ್‌ ಬಿಲ್‌ನೊಂದಿಗೆ ಲಿಂಕ್ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ನ್ಯಾಯಪೀಠ ಸಲಹೆ ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ಕೇವಲ ಇ-ಚಲನ್‌ಗಳನ್ನು ವಿತರಿಸುತ್ತಾ ಹೋದರೆ ಸಾಲದು, ಅವುಗಳ ಮೂಲಕ ವಿಧಿಸಲಾದ ದಂಡದ ಮೊತ್ತವನ್ನು ವಸೂಲಿ ಮಾಡುವುದು ಮುಖ್ಯ ಎಂದು ಹೇಳಿದೆ. ದಂಡ ಪಾವತಿಸದವರ ವಿದ್ಯುತ್‌ ಬಿಲ್‌ಗೆ ಬಾಕಿ ಮೊತ್ತವನ್ನು ಸೇರಿಸುವ ಮೂಲಕ ವಸೂಲಿಗೆ ವ್ಯವಸ್ಥೆ ರೂಪಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಇದರ ಜೊತೆಗೆ, ದಂಡ ಪಾವತಿಸದ ವಾಹನಗಳನ್ನು ಬ್ಲ್ಯಾಕ್‌ಲಿಸ್ಟ್‌ ಮಾಡುವುದು, ವಾಹನದ ಮಾಲೀಕತ್ವ ವರ್ಗಾವಣೆಗೆ ನಿರ್ಬಂಧ ವಿಧಿಸುವುದು ಸೇರಿದಂತೆ ಹಲವು ಕ್ರಮಗಳ ಬಗ್ಗೆಯೂ ನ್ಯಾಯಪೀಠ ಸಲಹೆ ನೀಡಿದೆ. ಬಾಕಿ ದಂಡ ಹೊಂದಿರುವ ವಾಹನಗಳ ನೋಂದಣಿ ಹಾಗೂ ಇತರ ದಾಖಲೆಗಳ ನವೀಕರಣದ ಮೇಲೂ ಅಗತ್ಯ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯನ್ನು ಕೋರ್ಟ್ ಪ್ರಸ್ತಾಪಿಸಿದೆ.

ದೇಶಾದ್ಯಂತ ಸುಮಾರು ₹45,000 ಕೋಟಿ ಮೌಲ್ಯದ ಇ-ಚಲನ್‌ ದಂಡದ ಮೊತ್ತವಿದ್ದು, ಈ ಪೈಕಿ ಸುಮಾರು ₹25,000 ಕೋಟಿ ವಸೂಲಾಗಿದೆ. ಇನ್ನೂ ಸುಮಾರು ₹20,000 ಕೋಟಿ ದಂಡದ ಮೊತ್ತ ವಸೂಲಿ ಬಾಕಿ ಇದೆ. ಈ ಬಾಕಿ ಮೊತ್ತವನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಸೂಕ್ತ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

By Ravikumar - 29-09-2026


Ads in Post