ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ದಿನಗಳಲ್ಲೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಸಂಜೆ 5.30ರವರೆಗೆ 16.6 ಮಿ.ಮೀ ಮಳೆಯಾಗಿದ್ದು, ನಗರದ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿದಿದೆ.
ಉತ್ತರ ಒಳನಾಡು ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಬಂಗಾಳ ಕೊಲ್ಲಿಯ ಪೂರ್ವ ಮಧ್ಯ ಮತ್ತು ಪಶ್ಚಿಮ ಮಧ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ವಾಯುಭಾರ ಕುಸಿತ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ಇದರೊಂದಿಗೆ ಮಧ್ಯ ತಮಿಳುನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮೈಯಿಂದ ಮೇಲ್ಮಟ್ಟದವರೆಗೆ ಚಂಡಮಾರುತದ ಪರಿಚಲನೆ ಕಂಡುಬಂದಿದೆ. ಆಗ್ನೇಯ ಅರಬ್ಬಿ ಸಮುದ್ರದಲ್ಲಿಯೂ ಹವಾಮಾನ ವ್ಯವಸ್ಥೆ ರೂಪುಗೊಂಡಿದ್ದು, ಕೇರಳ, ತಮಿಳುನಾಡು ಮತ್ತು ನೈಋತ್ಯ ಬಂಗಾಳ ಕೊಲ್ಲಿ ಭಾಗಗಳಲ್ಲಿ ವಾಯುಭಾರ ಕುಸಿತದ ಪರಿಸ್ಥಿತಿ ಇದೆ. ಈ ಎಲ್ಲ ಹವಾಮಾನ ವ್ಯವಸ್ಥೆಗಳ ಪರಿಣಾಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.