ನವದೆಹಲಿ: ದೆಹಲಿಯಲ್ಲಿ ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಕ್ಷದ (CJP) ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಆರು ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಪೂರ್ವ ಮಧ್ಯ ರೈಲ್ವೆಯ ದಾನಾಪುರ ವಿಭಾಗದ ಮಾಹಿತಿ ಪ್ರಕಾರ, ಅಕ್ಟೋಬರ್ 9ರಂದು ಸಂಚರಿಸಬೇಕಿದ್ದ ಹಲವು ರೈಲುಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನೊಂದೆಡೆ, ಮಧ್ಯಪ್ರದೇಶದ ಇಟಾರ್ಸಿ ಜಂಕ್ಷನ್ನಲ್ಲಿ ಗೋವಾ ಎಕ್ಸ್ಪ್ರೆಸ್ ರೈಲಿನಲ್ಲಿದ್ದ CJPಯ 15 ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ರಾಜಸ್ಥಾನದ ಅಲ್ವಾರ್ನಲ್ಲಿ CJP ನಾಯಕ ದೀಪಕ್ ಬಲಿಯನ್ ಅವರನ್ನು ಗೃಹಬಂಧನದಲ್ಲಿರಿಸಿ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ವರದಿಯಾಗಿದೆ. ರದ್ದುಗೊಂಡ ರೈಲುಗಳಲ್ಲಿ 12309 ರಾಜೇಂದ್ರ ನಗರ–ನವದೆಹಲಿ ಪಾಟ್ನಾ ತೇಜಸ್ ರಾಜಧಾನಿ ಎಕ್ಸ್ಪ್ರೆಸ್, 12393 ರಾಜೇಂದ್ರ ನಗರ–ನವದೆಹಲಿ ಎಕ್ಸ್ಪ್ರೆಸ್, 20801 ಇಸ್ಲಾಂಪುರ–ನವದೆಹಲಿ ಮಗಧ ಎಕ್ಸ್ಪ್ರೆಸ್ ಹಾಗೂ 22361 ರಾಜೇಂದ್ರ ನಗರ–ನವದೆಹಲಿ ಅಮೃತ್ ಭಾರತ್ ಎಕ್ಸ್ಪ್ರೆಸ್ ಸೇರಿವೆ.
ಇದರ ಜೊತೆಗೆ, ಅಕ್ಟೋಬರ್ 9ರಂದು ಸಂಚರಿಸಬೇಕಿದ್ದ 12559 ವಾರಣಾಸಿ–ನವದೆಹಲಿ ಶಿವಗಂಗಾ ಎಕ್ಸ್ಪ್ರೆಸ್ ಮತ್ತು 12581 ವಾರಣಾಸಿ–ನವದೆಹಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳನ್ನೂ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ರೈಲ್ವೆ ಸಂಚಾರದ ಕುರಿತು ಮುಂಚಿತವಾಗಿ ಮಾಹಿತಿ ಪರಿಶೀಲಿಸುವಂತೆ ಸೂಚಿಸಲಾಗಿದೆ.