Search


ನಖ್ವಿ ಹಠಕ್ಕೆ ಭಾರತ ಸೆಡ್ಡು: ಟ್ರೋಫಿ ಸ್ವೀಕರಿಸದೇ ಡ್ರೆಸ್ಸಿಂಗ್ ರೂಮ್ ಸೇರಿದ ಮಹಿಳಾ ಪಡೆ!

ಏಷ್ಯಾ ಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ 8ನೇ ಬಾರಿ ಪ್ರಶಸ್ತಿ ಗೆದ್ದ ಭಾರತೀಯ ಮಹಿಳಾ ತಂಡ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಪಾಕಿಸ್ತಾನದ ಕೇಂದ್ರ ಗೃಹ ಸಚಿವರೂ ಆಗಿರುವ ನಖ್ವಿ ಅವರಿಂದಲೇ ಟ್ರೋಫಿ ಪಡೆಯಬೇಕೇ ಎಂಬ ಚರ್ಚೆ ಪಂದ್ಯಕ್ಕೂ ಮುನ್ನವೇ ನಡೆದಿತ್ತು.

ಫೈನಲ್ ಪಂದ್ಯದ ಅಂತಿಮ ಹಂತದಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಅಧಿಕಾರಿಗಳು ಪರಸ್ಪರ ಚರ್ಚೆ ನಡೆಸುತ್ತಿರುವುದು ಕಂಡುಬಂದಿತು. ಪಂದ್ಯ ಮುಗಿದ ಬಳಿಕ ಸೈಕಿಯಾ ಮತ್ತು ಶುಕ್ಲಾ ಭಾರತೀಯ ಆಟಗಾರ್ತಿಯರೊಂದಿಗೆ ಮಾತುಕತೆ ನಡೆಸಿದರು. ಆದರೆ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾದಾಗ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಆಟಗಾರ್ತಿಯರು ಮೈದಾನಕ್ಕೆ ಆಗಮಿಸದೆ ಡ್ರೆಸ್ಸಿಂಗ್ ರೂಮ್‌ನಲ್ಲೇ ಉಳಿದರು.

ಮೊದಲು ಶ್ರೀಲಂಕಾ ಆಟಗಾರ್ತಿಯರು ರನ್ನರ್‌ಅಪ್ ಪದಕಗಳನ್ನು ಸ್ವೀಕರಿಸಿದರು. ಬಳಿಕ ಭಾರತ ತಂಡದ ಟ್ರೋಫಿ ಸ್ವೀಕಾರದ ಸರದಿ ಬಂದಾಗ, ನಖ್ವಿ ಅವರಿಂದ ಪ್ರಶಸ್ತಿ ಪಡೆಯಲು ಭಾರತೀಯ ತಂಡ ನಿರಾಕರಿಸಿತು. ಎಸಿಸಿ ಉಪಾಧ್ಯಕ್ಷ ಖಾಲಿದ್ ಝರೂನಿ ಅವರಿಂದ ಟ್ರೋಫಿ ಕೊಡಿಸುವಂತೆ ಭಾರತ ಮನವಿ ಮಾಡಿತ್ತು ಎನ್ನಲಾಗಿದೆ. ಆದರೆ ನಖ್ವಿ ಅವರೇ ಟ್ರೋಫಿ ಹಸ್ತಾಂತರಿಸುವುದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಭಾರತೀಯ ಆಟಗಾರ್ತಿಯರು ವೇದಿಕೆಗೆ ತೆರಳಲಿಲ್ಲ. ಪರಿಣಾಮವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದುವರಿಸಲು ಸಾಧ್ಯವಾಗದೆ ನಿರೂಪಕರು ಸಮಾರಂಭವನ್ನು ಮುಕ್ತಾಯಗೊಳಿಸಿದರು.

ಭಾರತ–ಪಾಕಿಸ್ತಾನ ನಡುವಿನ ಇತ್ತೀಚಿನ ರಾಜಕೀಯ ಮತ್ತು ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇಂತಹ ಬೆಳವಣಿಗೆಗಳು ಕ್ರಿಕೆಟ್‌ನಲ್ಲೂ ಪ್ರತಿಫಲಿಸುತ್ತಿವೆ. ಪುರುಷರ ಏಷ್ಯಾ ಕಪ್ ವೇಳೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವಕ್ಕೆ ನಿರಾಕರಿಸಿತ್ತು. ಅಲ್ಲದೆ, ಆ ಟೂರ್ನಿಯ ಟ್ರೋಫಿಯನ್ನೂ ಭಾರತ ಸ್ವೀಕರಿಸಿರಲಿಲ್ಲ. ಇದೀಗ ಮಹಿಳಾ ಏಷ್ಯಾ ಕಪ್‌ನ ಟ್ರೋಫಿ ವಿಚಾರದಲ್ಲೂ ಇದೇ ರೀತಿಯ ಬೆಳವಣಿಗೆ ನಡೆದಿರುವುದು ಗಮನ ಸೆಳೆದಿದೆ.

ಇದಕ್ಕೂ ಮುನ್ನ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ಫೈನಲ್‌ನಲ್ಲಿ ಶ್ರೀಲಂಕಾವನ್ನು 72 ರನ್‌ಗಳಿಂದ ಸೋಲಿಸಿತು. ಈ ಭರ್ಜರಿ ಗೆಲುವಿನೊಂದಿಗೆ ಹರ್ಮನ್‌ಪ್ರೀತ್ ಕೌರ್ ಪಡೆ 8ನೇ ಬಾರಿಗೆ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

By Ravikumar - 14-09-2026


Ads in Post