Search


ಧರ್ಮತೀತವಾಗಿ ಎಲ್ಲರಿಗೂ ಭಾರತ ಜಾಗಕೊಟ್ಟಿದೆ; ಹಿಂದೂ ಧರ್ಮ ಇಡೀ ಜಗತ್ತನ್ನೇ ಒಂದುಗೂಡಿಸಿದೆ ಎಂದ ಭಾಗವತ್

ಟೊರೊಂಟೊ: ಹಿಂದು ಧರ್ಮವು ಸಮಾಜವನ್ನು ವಿಭಜಿಸುವುದಲ್ಲ, ಬದಲಾಗಿ ಇಡೀ ಜಗತ್ತನ್ನು ಒಗ್ಗೂಡಿಸುವ ಚಿಂತನೆ ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಟೊರೊಂಟೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಇತರರಿಗೆ ನೆರವಾಗುವುದು ಹಾಗೂ ಇಡೀ ಜಗತ್ತನ್ನು ಒಂದೇ ಕುಟುಂಬದಂತೆ ನೋಡುವ ಮನೋಭಾವವಿದೆ ಎಂದು ಹೇಳಿದರು. ‘ಹಿಂದು’ ಎಂಬ ಪದವನ್ನು ಕೇವಲ ಒಂದು ನಿರ್ದಿಷ್ಟ ಧರ್ಮ, ಭಾಷೆ ಅಥವಾ ಪೂಜಾ ಪದ್ಧತಿಗೆ ಸೀಮಿತಗೊಳಿಸಬಾರದು. ಹಿಂದು ತತ್ತ್ವವು ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ಎಲ್ಲರನ್ನು ಒಗ್ಗೂಡಿಸುವ ಸಂದೇಶ ನೀಡುತ್ತದೆ ಎಂದು ಭಾಗವತ್ ವಿವರಿಸಿದರು.

ವಿಶ್ವದ ವಿವಿಧ ಭಾಗಗಳಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಭಾರತ ಹಿಂದಿನಿಂದಲೂ ಆಶ್ರಯ ನೀಡಿದೆ ಎಂದು ಅವರು ಉಲ್ಲೇಖಿಸಿದರು. ಪಾರ್ಸಿಗಳು, ಯಹೂದಿಗಳು, ಮುಸ್ಲಿಮರು ಮತ್ತು ಕ್ರೈಸ್ತರಿಗೆ ಭಾರತ ಸದಾ ಸುರಕ್ಷಿತ ನೆಲ ಒದಗಿಸಿದೆ ಎಂದರು. ಜಗತ್ತಿನ ಯಾವುದೇ ಭಾಗದಲ್ಲಿ ಸಂಕಷ್ಟ ಎದುರಾದರೂ ಭಾರತೀಯರು ನೆರವಿಗೆ ಧಾವಿಸುವ ಮನೋಭಾವ ಹೊಂದಿದ್ದಾರೆ. ಇತ್ತೀಚಿನ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದ ಕಾರ್ಯಾಚರಣೆಗಳು ಇದಕ್ಕೆ ಉದಾಹರಣೆ ಎಂದು ಹೇಳಿದರು.

ವಸುಧೈವ ಕುಟುಂಬಕಂಸಂದೇಶ

ಮುಕ್ತ ಮನಸ್ಸಿನ ಹಾಗೂ ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣಕ್ಕೆ ‘ವಸುಧೈವ ಕುಟುಂಬಕಂ’ ಎಂಬ ಚಿಂತನೆ ಅಗತ್ಯವಾಗಿದೆ. ಹಿಂದು ಸಮಾಜ ಜಾಗೃತವಾದರೆ ಅದರ ಪರಿಣಾಮ ಇಡೀ ಜಗತ್ತಿನ ಮೇಲೂ ಬೀರುತ್ತದೆ ಎಂದು ಮೋಹನ್ ಭಾಗವತ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಕೆನಡಾದ ವಿವಿಧ ಪ್ರಾಂತ್ಯಗಳಿಂದ ಸುಮಾರು 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕೆನಡಾದ ಮಾಜಿ ರಕ್ಷಣಾ ಸಚಿವ ಹಾಗೂ ಆಲ್ಬರ್ಟಾದ ಮಾಜಿ ಪ್ರೀಮಿಯರ್ ಜೇಸನ್ ಕೆನ್ನಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

By Ravikumar - 31-08-2026


Ads in Post