ಪುಣೆ : ಮಹರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಮತ್ತಷ್ಟು ಮಾಹಿತಿ ಇದೀಗ ಬಯಲಾಗಿದೆ, ಭಾವಿ ಪತಿಯನ್ನ ಮುಗಿಸಲು ಸಿಯಾ ಗೋಯಲ್ ಎರೆಡೆರಡು ಭಾರಿ ಪ್ರಯತ್ನಿಸಿದ್ದಳು, ಆದರೆ ತನ್ನ ಕೈಯಲ್ಲಿ ಆಗದಿದ್ದಾಗ, ಪ್ರಿಯಕರನ ಸಹಾರ ಪಡೆದಿದ್ದಳು ಎಂಬ ಅಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಏನಿದು ಘಟನೆ..!
ಕೇತನ್ ಮತ್ತು ಸಿಯಾ ಇದೇ ವರ್ಷದ ಕೊನೆಯಲ್ಲಿ ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಭರ್ಜರಿಯಾಗಿ ಮದುವೆ ನಿಶ್ಚಯವಾಗಿತ್ತು. ಆದರೆ ಸಿಯಾಳಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ಕೇತನ್‌ನನ್ನು ಮುಗಿಸಲು ಸಂಚು ಮಾಡಿದ್ದಳು. ಅದರಂತೆ ಫ್ರೀ- ವೆಡ್ಡಿಂಗ್ ಶೂಟ್‌ಗೆ ಎಂದು ಪುಣೆಯ ಕೋಟೆಗೆ ಇಬ್ಬರು ತೆರಳಿದ್ದಳು. ಈ ವೇಳೆ ಅಲ್ಲಿಗೆ ಪ್ರಿಯಕರನನ್ನ ಕರೆಸಿದ್ದ ಸಿಯಾ, ಕೇತನ್‌ನನ್ಜು ಕೋಟೆಯ ಮೇಲಿಂದ 400 ಅಡಿ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ್ದರು. ಇದಾದ ನಂತರ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕಥೆ ಕಟ್ಟಿದ್ದಳು, ಆದರೆ ಇದೀಗ ಪೊಲೀಸ್ ತನಿಖೆಯಲ್ಲಿ ಮಳ್ಳಿಯ ನವರಂಗಿ ಆಟಗಳು ಒಂದೊಂದಾಗಿ ಹೊರಗೆ ಬಂದಿವೆ.
ಮೊದಲ ಕೊಲೆ ಯತ್ನ ಫೇಲ್...!
ಮೃತ ಕೇತನ್ ತಂದೆ ವಿಶಾಲ್ ಅಗರ್ವಾಲ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅತ್ಯಂತ ಬೆಚ್ಚಿಬೀಳಿಸುವ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಜೂನ್ 18 ರಂದು ನಡೆದ ಕೊಲೆಗೆ ಕೇವಲ ನಾಲ್ಕು ದಿನಗಳ ಮುಂಚೆ, ಅಂದರೆ ಜೂನ್ 14 ರಂದೇ ಸಿಯಾ ಮೊದಲ ಬಾರಿಗೆ ಕೇತನ್‌ನನ್ನು ಕೊಲ್ಲಲು ಯತ್ನಿಸಿದ್ದಳು.ಇಬ್ಬರೂ ವಿವಾಹಪೂರ್ವ ಪ್ರವಾಸಕ್ಕಾಗಿ ಬಾಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಆದರೆ ಅಲ್ಲಿ ಹಠಾತ್ ಆಗಿ ಕೇತನ್‌ನ ಪಾಸ್‌ಪೋರ್ಟ್ ನಾಪತ್ತೆಯಾಗಿತ್ತು ಇದರಿಂದ ಪ್ರವಾಸ ರದ್ದಾಗಿ ಇಬ್ಬರೂ ಮನೆಗೆ ಮರಳಿದ್ದರು.
ಇದಾದ ನಂತರ ಮೂರನೇ ದಿನ ಸಿಯಾ ಜಗಳವಾಡಿ, ತನ್ನೊಂದಿಗೆ ಲೋಹಗಡ್ ಕೋಟೆಗೆ ಬರುವಂತೆ ಕೇತನ್‌ನನ್ನು ಒಪ್ಪಿಸಿದಳು. ಕೋಟೆಯ ಮೇಲೆ ಇಬ್ಬರೇ ಇದ್ದಾಗ ಸಿಯಾ ಕೇತನ್‌ನನ್ನು ಕೋಟೆ ಮೇಲಿಂದ ತಳ್ಳಿದ್ದಾಳೆ. ಅದೃಷ್ಟವಶಾತ್ ಕೇತನ್ ಕೆಳಗೆ ಬೀಳುವಾಗ ಅಲ್ಲಿದ್ದ ಪೊದೆಯೊಂದನ್ನು ಗಟ್ಟಿಯಾಗಿ ಹಿಡಿದು ಪ್ರಾಣ ಉಳಿಸಿಕೊಂಡಿದ್ದ. ತಾನು ತಳ್ಳಿದ ರಹಸ್ಯ ಬಯಲಾಗಬಹುದು ಎಂದು ಹೆದರಿದ ಸಿಯಾ, ತಕ್ಷಣವೇ ‘ಹಾವು ಹಾವು’ ಎಂದು ಜೋರಾಗಿ ಕೂಗುತ್ತಾ ಓಡಿ ಬಂದು ಕೇತನ್‌ನನ್ನು ಬಿಗಿಯಾಗಿ ತಬ್ಬಿಕೊಂಡು ನಾಟಕವಾಡಿದ್ದಳು ಅಂದು ಕೇತನ್ ತನ್ನ ಭಾವಿ ಪತ್ನಿಯ ಕುತಂತ್ರವನ್ನು ಅರಿಯದೆ ಆಕೆಯನ್ನು ನಂಬಿಬಿಟ್ಟಿದ್ದ.
ಎರಡನೇ ಯತ್ನದಲ್ಲಿ ಪ್ರಿಯಕರನ ಎಂಟ್ರಿ; ಯಶಸ್ವಿಯಾದ ಸಂಚು
ಸಿಯಾ ತನ್ನ ಬೇಕರಿ ವ್ಯವಹಾರದ ಸಂಪರ್ಕದ ಮೂಲಕ ಪರಿಚಯವಾಗಿದ್ದ ಡ್ರೈ ಫ್ರೂಟ್ಸ್ ಕಂಪನಿ ಮಾಲೀಕ ಚೇತನ್ ಚೌಧರಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ತಮಗೆ ಅಡ್ಡಿಯಾಗಿದ್ದ ಕೇತನ್‌ನನ್ನು ಮುಗಿಸಲು ಇಬ್ಬರೂ ಸ್ಕೆಚ್ ಹಾಕಿದ್ದರು.
ಜೂನ್ 18 ರಂದು ಸಿಯಾ ಮತ್ತೆ ಕೇತನ್‌ನನ್ನು ವಿಹಾರದ ನೆಪದಲ್ಲಿ ಲೋಹಗಡ್ ಕೋಟೆಗೆ ಕರೆದೊಯ್ದಳು. ಮೊದಲೇ ಪ್ಲಾನ್ ಮಾಡಿದಂತೆ ಆಕೆಯ ಪ್ರಿಯಕರ ಚೇತನ್ ಕೂಡ ಅಲ್ಲಿಗೆ ಬಂದಿದ್ದ. ಬಿರುಗಾಳಿ ಬೀಸುತ್ತಿದ್ದ ಸಮಯದಲ್ಲಿ ಇಬ್ಬರೂ ಸೇರಿ ಕೇತನ್‌ನನ್ನು ಕೋಟೆಯ ತುದಿಯಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ತೀವ್ರವಾಗಿ ಗಾಯಗೊಂಡ ಕೇತನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಆರೋಪಿಗಳು...!
ಕೊಲೆಯ ಬಳಿಕ ಸಿಯಾ ಪೊಲೀಸರ ಮುಂದೆ, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಆಗ ಕೇತನ್ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದರು ಎಂದು ಕಣ್ಣೀರು ಹಾಕಿದ್ದಳು. ಪೊಲೀಸರು ಮೊದಲು ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿದ್ದರು. ಆದರೆ, ಕೇತನ್ ತಂದೆಯ ಅನುಮಾನ ಮತ್ತು ಸ್ಥಳೀಯ ಅಪರಾಧ ವಿಭಾಗದ ತನಿಖೆಯ ವೇಳೆ ಚೇತನ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಇಡೀ ಕೊಲೆ ಸಂಚನ್ನು ಒಪ್ಪಿಕೊಂಡಿದ್ದಾನೆ. ಆ ಮಾಹಿತಿಯ ಆಧಾರದ ಮೇಲೆ ಸಿಯಾಳನ್ನು ಕೂಡ ಬಂಧಿಸಲಾಗಿದೆ.