ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಷಡ್ಯಂತ್ರ ರೂಪಿಸಿದ್ದ ಐವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಚಿನ್ನಯ್ಯ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಚಿನ್ನಯ್ಯನ ಅರ್ಜಿಯಲ್ಲಿರುವ ಗಂಭೀರ ಆರೋಪಗಳೇನು?
ಎಸ್ಐಟಿ ವಿರುದ್ಧವೇ ಅಸಮಾಧಾನ: ಈ ಇಡೀ ಪ್ರಕರಣದಲ್ಲಿ ನಿಜವಾದ ಸಂಚುಕೋರರನ್ನು ಬಿಟ್ಟು, ಎಸ್ಐಟಿ (SIT) ಅಧಿಕಾರಿಗಳು ಷಡ್ಯಂತ್ರ ಮಾಡಿದವರನ್ನು ರಕ್ಷಿಸುತ್ತಿದ್ದಾರೆ. 9 ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಿನ್ನಯ್ಯ ಆರೋಪಿಸಿದ್ದಾನೆ.
ಐವರ ವಿರುದ್ಧ ದೂರು: ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ವಿಠಲ್ ಗೌಡ, ಜಯಂತ್ ಹಾಗೂ ಸಮೀರ್ ವಿರುದ್ಧ ಕ್ರಮ ಜರುಗಿಸಬೇಕೆಂದು ಅರ್ಜಿ ಸಲ್ಲಿಸಲಾಗಿದೆ.
ಜೀವ ಬೆದರಿಕೆ ಹಾಕಿ ವಿಡಿಯೋ ಶೂಟ್: ತನಗೆ ಜೀವಬೆದರಿಕೆ ಒಡ್ಡಿ, ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳಿಕೆ ಕೊಡುವಂತೆ ಒತ್ತಾಯಿಸಲಾಗಿತ್ತು. ಗಿರೀಶ್ ಮಟ್ಟಣ್ಣವರ್ ತನಗೆ ಹೆದರಿಸಿ ಬರೋಬ್ಬರಿ 30 ರಿಂದ 35 ವಿಡಿಯೋಗಳನ್ನು ಮಾಡಿಸಿದ್ದರು ಎಂದು ಚಿನ್ನಯ್ಯ ಉಲ್ಲೇಖಿಸಿದ್ದಾನೆ.
ಹೆಣ ಹೂತಿದ್ದಾಗಿ ಸುಳ್ಳು ಹೇಳಲು ಪ್ರಚೋದನೆ: "ಬುರುಡೆ ಗ್ಯಾಂಗ್ ತೋರಿಸಿದ ಜಾಗದಲ್ಲಿ ಹೆಣ ಹೂಳಲಾಗಿದೆ" ಎಂದು ಪೊಲೀಸರ ಮುಂದೆ ಸುಳ್ಳು ಸಾಕ್ಷಿ ಹೇಳುವಂತೆ ಚಿನ್ನಯ್ಯನಿಗೆ ಬೆದರಿಕೆ ಹಾಕಲಾಗಿತ್ತು. ತಮಿಳುನಾಡಿನ ವ್ಯಕ್ತಿಯೊಬ್ಬ ಕೂಡ ಮಟ್ಟಣ್ಣವರ್ ಹೇಳಿದಂತೆ ಕೇಳಲು ಒತ್ತಡ ಹಾಕಿದ್ದರು ಎನ್ನಲಾಗಿದೆ.
200 ಕೋಟಿ ರೂ ವೆಚ್ಚದ ಬೃಹತ್ ಸ್ಕೆಚ್?:
ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಲು ಈ ಬುರುಡೆ ಗ್ಯಾಂಗ್ ಬರೋಬ್ಬರಿ 200 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿತ್ತೇ? ಎಂಬ ಶಂಕೆ ವ್ಯಕ್ತವಾಗಿದ್ದು, ಈ ಷಡ್ಯಂತ್ರದ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ವಹಿವಾಟು ನಡೆದಿರುವ ಬಗ್ಗೆ ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾನೆ. ತನಗೆ 50 ಲಕ್ಷ ರೂಪಾಯಿ ಕೊಡುವ ಭರವಸೆಯನ್ನು ತಿಮರೋಡಿ ಮತ್ತು ಮಟ್ಟಣ್ಣವರ್ ನೀಡಿದ್ದರು ಎಂದು ಹೇಳಿದ್ದಾನೆ.
ಹೆಗ್ಗಡೆಯವರ ಹೆಸರು ಹಾಳು ಮಾಡುವ ಯತ್ನ: ವೀರೇಂದ್ರ ಹೆಗ್ಗಡೆಯವರ ಕೀರ್ತಿಗೆ ಧಕ್ಕೆ ತರಲು ತನ್ನನ್ನು ದಾಳವಾಗಿ ಬಳಸಿಕೊಳ್ಳಲಾಗಿತ್ತು ಎಂದು ಚಿನ್ನಯ್ಯ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಕೇರಳದ ಮಹಿಳೆಯ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ, ಕೇರಳದಲ್ಲಿ ಎಸ್ಐಟಿ ರಚನೆಗೆ ಒತ್ತಡ ಹೇರಿದ್ದರ ಬಗ್ಗೆಯೂ ಉಲ್ಲೇಖವಿದೆ.
ತನಿಖೆಗೆ ಮೀನಾಮೇಷ ಏಕೆ ?
ಕಳೆದ 2025ರ ಡಿಸೆಂಬರ್ 18 ರಂದೇ ಚಿನ್ನಯ್ಯ ಅವರು ಈ ಷಡ್ಯಂತ್ರದ ವಿರುದ್ಧ ದೂರು ನೀಡಿದ್ದರೂ, ಎಸ್ಐಟಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿರುವ ಈ ಐದು ಮಂದಿ ಆರೋಪಿಗಳ ವಿರುದ್ಧ ಅಂತಿಮ ವರದಿ ಸಲ್ಲಿಕೆ ಇನ್ನೂ ಬಾಕಿ ಇದೆ.
ಹೀಗಾಗಿ, ಎಸ್ಐಟಿ ತನಿಖೆ ನಂಬದ ಚಿನ್ನಯ್ಯ ಅವರು, ಹೈಕೋರ್ಟ್ ಮಧ್ಯಪ್ರವೇಶಿಸಿ ಈ ಐವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಹಾಗಿದ್ದರೆ ಇತ್ತೀಚಿಗೆ ಸದ್ದು ಮಾಡಿದ್ದ ಈ ಬುರುಡೆ ಹಗರಣ ಒಂದು ವ್ಗವಸ್ಥಿತ ಷಡ್ಯಂತ್ರವೇ?