Search


ಸ್ವಾವಲಂಬಿ ಭಾರತ ಎಂದರೆ ಇದೇನಾ; ಸಕ್ಕರೆ ಆಮದು ಮಾಡಿಕೊಳ್ಳುತ್ತಿರುವ ಮೋದಿ ಸರ್ಕಾರದ ವಿರುದ್ಧ ಖರ್ಗೆ ಆಕ್ರೋಶ

ನವದೆಹಲಿ: ದೇಶದಲ್ಲಿ ಸಕ್ಕರೆ ಬೆಲೆ ರಾಕೆಟ್‌ ವೇಗದಲ್ಲಿ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ವಿದೇಶಗಳಿಂದ ಕಚ್ಚಾ ಸಕ್ಕರೆಯನ್ನ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ʻಮೋದಿ ಸರ್ಕಾರ ನೀತಿಗಳ ಕಹಿ, ಸಕ್ಕರೆಯ ಸಿಹಿಯಲ್ಲಿ ಬೆರೆತಿವೆ, ವಿಶ್ವಕ್ಕೆಲ್ಲಾ ಸಕ್ಕರೆ ರಫ್ತು ಮಾಡುತ್ತಿದ್ದ ಭಾರತ, ಈಗ ಸಕ್ಕರೆ ಆಮದು ಮಾಡಿಕೊಳ್ಳುತ್ತಿದ್ದು, ಸ್ವಾವಲಂಬಿ ಭಾರತ ಎಂದರೆ ಇದೇನಾ ಎಂದು ಖರ್ಗೆ ಗುಡುಗಿದ್ದಾರೆ.

ಸಕ್ಕರೆ ಬೆಲೆ ಏರಿಕೆ ಕುರಿತು 'ಎಕ್ಸ್'ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ ʻಪ್ರಧಾನಿ ಮೋದಿ ಸರ್ಕಾರಕ್ಕೆ ಮೂರು ನೇರ ಪ್ರಶ್ನೆಗಳನ್ನು ಕೇಳಿದ್ದು, ಸರ್ಕಾರದ 'ಆತ್ಮನಿರ್ಭರ ಭಾರತ'ದ ಘೋಷಣೆಯ ಬಗ್ಗೆಯೂ ಪ್ರಶ್ನಿಸಿದ್ದಾರೆ. 'ಹಬ್ಬಗಳಿಗೂ ಮುನ್ನವೇ, ಮೋದಿ ಸರ್ಕಾರದ ನೀತಿಗಳ ಕಹಿ ಅಂಶಗಳು ಸಕ್ಕರೆಯ ಸಿಹಿಯಲ್ಲಿ ಬೆರೆತುಹೋಗಿವೆ. ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ರಫ್ತುದಾರ ದೇಶವಾದ ಭಾರತದಲ್ಲಿ, ಸಕ್ಕರೆ ದಾಸ್ತಾನು ಇಂದು ಕಳೆದ 9 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿರುವುದೇಕೆ? ರಫ್ತನ್ನು ನಿಲ್ಲಿಸುವ ಮತ್ತು 1 ದಶಲಕ್ಷ ಟನ್ ಸಕ್ಕರೆಯನ್ನು ಸುಂಕ-ಮುಕ್ತವಾಗಿ ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ನಾವು ಹೇಗೆ ತಲುಪಿದೆವು? 2. ಮೂರು ತಿಂಗಳುಗಳಲ್ಲಿ ಸಕ್ಕರೆ ಬೆಲೆ ಸುಮಾರು ಶೇ 40ರಷ್ಟು ಏರಿಕೆಯಾಗಿದೆ; ಹಬ್ಬಗಳ ಹೊತ್ತಲ್ಲೇ ಸಾರ್ವಜನಿಕರ ಮೇಲೆ ಹೊರೆಯಾಗಿರುವ ಈ ಬೆಲೆ ಏರಿಕೆಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಇದರ ಜೊತೆಗೆ ದೇಶದಲ್ಲಿ ಸಕ್ಕರೆ ಕೊರತೆಯಿದ್ದು, ಈಗಿರುವಾಗಲೂ E20 ಇಂಧನಕ್ಕಾಗಿ ಎಥೆನಾಲ್‌ ಉತ್ಪಾದಿಸಲು ಕಬ್ಬು ಮತ್ತು ಧಾನ್ಯಗಳನ್ನ ಬಳಸುವ ನೀತಿಯನ್ನ ಮೋದಿ ಸರ್ಕಾರ ಏಕೆ ಪರಿಶೀಲಿಸುತ್ತಿಲ್ಲ, ನಿಮ್ಮ ಪ್ರಕಾರ ಸ್ವಾವಲಂಬಿ ಭಾರತ ಎಂದರೆ ಇದೇನಾ ಎಂದು ಖರ್ಗೆ ಪ್ರಶ್ನಿಸಿದ್ದಾರೆ.  

ಇನ್ನು ಸಕ್ಕರೆ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ʻಜುಲೈ 20 ರಂದು ಪ್ರತಿ ಕೆಜಿಗೆ ₹48.18 ಇದ್ದ ಸಕ್ಕರೆಯ ಚಿಲ್ಲರೆ ಮಾರಾಟ ದರವು ಆಗಸ್ಟ್ 20ರ ವೇಳೆಗೆ ಪ್ರತಿ ಕೆಜಿಗೆ ₹55.70ಕ್ಕೆ ಏರಿಕೆಯಾಗಿರುವುದಕ್ಕೆ ಎಥೆನಾಲ್ ಉತ್ಪಾದನೆಗೆ ಕಬ್ಬನ್ನು ಬಳಸುತ್ತಿರುವುದು ಕಾರಣವಲ್ಲ, ಬದಲಾಗಿ ಇದು ವಿವಿಧ ಅಂಶಗಳ ಸಂಯೋಜನೆಯ ಪರಿಣಾಮ ಎಂದು ತಿಳಿಸಿದೆ. 'ಎಥೆನಾಲ್ ತಯಾರಿಕೆಗೆ ಬಳಸಲಾದ ಕಬ್ಬಿನ ಪ್ರಮಾಣವು 2022-23ರಲ್ಲಿದ್ದ ಸುಮಾರು ಶೇ 12ರಿಂದ 2025-26ರ ವೇಳೆಗೆ ಸುಮಾರು ಶೇ 9ಕ್ಕೆ ಇಳಿಕೆಯಾಗಿದೆ; ಅದೇ ಸಮಯದಲ್ಲಿ, ದೇಶದ ಒಟ್ಟು ಎಥೆನಾಲ್ ಉತ್ಪಾದನೆಯಲ್ಲಿ ಸುಮಾರು ಮೂರನೇ ನಾಲ್ಕು ಭಾಗದಷ್ಟು ಈಗ ಧಾನ್ಯಗಳಿಂದ, ಅದರಲ್ಲೂ ವಿಶೇಷವಾಗಿ ಜೋಳದಿಂದ (ಮೈಸ್) ಉತ್ಪಾದನೆಯಾಗುತ್ತಿದೆ ಎಂದು ಸಚಿವಾಲಯ ವಿವರಿಸಿದೆ.

By Ravikumar - 23-08-2026


Ads in Post