ಬಳ್ಳಾರಿ: ಸಚಿವ ಸ್ಥಾನಕ್ಕೆ ಬಿ, ನಾಗೇಂದ್ರ ರಾಜೀನಾಮೆ ಘೋಷಿಸಿದ ಕುರಿತು ಶಾಸಕ ಜನಾರ್ದನ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ ʻರಾಜಕೀಯಕ್ಕೆ ರಾಮಾಯಣವನ್ನ ನಾಗೇಂದ್ರ ಎಳೆದು ತಂದಿದ್ದಾರೆ, ಕಣ್ಣೀರಾಕುತ್ತ ನಾಗೇಂದ್ರ ನಾಟಕ ಮಾಡುತ್ತಿರುವುದನ್ನ ನೋಡಿದ್ದೇನೆ, ನಿನ್ನ ರಾಜಕೀಯ ಜೀವನ ಶುರುವಾಗಿದ್ದೇ ಭಾರತದಿಂದ ಎಂದು ಜನಾರ್ದನ್ ರೆಡ್ಡಿ ಹೇಳಿದ್ದಾರೆ.
ನಿನ್ನೆ ಸುದ್ದಿಗೋಷ್ಟಿ ನಡೆಸಿ ರಾಜೀನಾಮೆ ಘೋಷಿಸಿದ್ದ ಸಚಿವ ನಾಗೇಂದ್ರ ಈ ವೇಳೆ ʻರಾಮಾಯಣದಲ್ಲಿ ಶಂಭುಕನನ್ನು ವಧಿಸುವ ರೀತಿ ನನ್ನನ್ನ ವಧಿಸಿದ್ದಾರೆ, ದಲಿತರನ್ನ ಕಂಡರೆ ಬಿಜೆಪಿಗರಿಗೆ ಆಗಲ್ಲ ಎಂದು ಆರೋಪಿಸಿದ್ದರು, ಇದಕ್ಕೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಜನಾರ್ದನ್ ರೆಡ್ಡಿ(Janardhana Reddy) ʻನಾಗೇಂದ್ರ ಸ್ವಯಂ ಘೋಷಿತ ಶಂಭುಕ. ನಾಗೇಂದ್ರ ಅವರು ಕಣ್ಣೀರು ಹಾಕುತ್ತಾ ನಾಟಕ ಮಾಡುತ್ತಿರುವುದನ್ನು ನೋಡಿದ್ದೇನೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ನಾಸೀರ್ ಹುಸೇನ್ ನಿನ್ನೆ ನಾಗೇಂದ್ರ ಪಕ್ಕದಲ್ಲಿ ಕುಳಿತಿದ್ದ. ಕಲಿಯುಗದ ಷಣ್ಮುಖ ತಮ್ಮ ನಾಗೇಂದ್ರ ಎಂದು ವ್ಯಂಗ್ಯವಾಡಿದರು.
ಮುಂದುವರಿದು ಮಾತನಾಡಿದ ಜನಾರ್ದನ್ ರೆಡ್ಡಿ ʻನನ್ನಿಂದ ನೀನು ಎಂಎಲ್ಎ ಆಗಿದ್ದೀಯ, ನಿನ್ನ ಇತಿಹಾಸದ ಬಗ್ಗೆ ನಮ್ಮವರಿಗೆ ಗೊತ್ತಿದೆ, ನಿನ್ನ ರಾಜಕೀಯ ಆರಂಭವಾಗಿದ್ದು ಬಿಜೆಪಿಯಿಂದ. ವಾಲ್ಮೀಕಿ ರಾಮಾಯಣದ ಬಗ್ಗೆ ಶಂಭುಕನ ಬಗ್ಗೆ ಮಾತನಾಡುತ್ತೀಯಾ? ರಾಜಕೀಯಕ್ಕೆ ರಾಮಾಯಣ ತರುತ್ತೀಯಾ? ಈ ಬಗ್ಗೆ ನಿನಗೆ ಮಾತನಾಡಲು ಯೋಗ್ಯತೆ ಇಲ್ಲ. ಶಂಭುಕನ ಹತ್ಯೆ ಯಾಕೆ ಆಯ್ತು ನಿನಗೆ ಗೊತ್ತಾ? ದಲಿತ ಚಂದ್ರಶೇಖರ್ ಅವರನ್ನು ನೇರವಾಗಿ ಹತ್ಯೆ ಮಾಡಿದ್ದು ನೀವು. ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣವಾಗಿದ್ದು ನೀನು. ಬಿಜೆಪಿ ಎಂಎಲ್ಎ ಇದ್ದಾಗ ನಿನಗೆ ಮನುವಾದ ಗೊತ್ತಿರಲಿಲ್ವ ಎಂದು ಪ್ರಶ್ನಿಸಿದರು.
ನಾವೆಲ್ಲ ರಿಜೆಕ್ಟೆಡ್ ಪೀಸಾ? ಕಲಬುರಗಿಯಲ್ಲಿ ಹೀನಾಯ ಸೋಲನ್ನು ಕಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ನೀವು ಇವತ್ತು ನಿಮ್ಮ ಎಐಸಿಸಿ ಅಧ್ಯಕ್ಷ ಮಾಡಿದ್ದೀರಿ. ಹಾಗಿದ್ರೆ ಅವರು ರಿಜಕ್ಟೆಡ್ ಪೀಸಾ? ಮಾತನಾಡುವ ಮೊದಲು ತಲೆಯಲ್ಲಿ ಸ್ವಲ್ಪ ಬುದ್ಧಿ ಇರಬೇಕು. ರಾಜಕೀಯದಲ್ಲಿ ಸೋಲು-ಗೆಲುವು ಎನ್ನುವುದು ಸರ್ವೇ ಸಾಮಾನ್ಯ. ವಾಲ್ಮೀಕಿ ನಿಗಮದ ದುಡ್ಡಿನಲ್ಲಿ ತುಕಾರಾಂ ಗೆದ್ದಿದ್ದಾನೆ.ತುಕಾರಾಂ ಕೂಡ ರಾಜೀನಾಮೆ ಕೊಡಬೇಕಿತ್ತು. ನಾಗೇಂದ್ರ ನಿನಗೆ ನಿನ್ನ ಪಕ್ಷಕ್ಕೆ ತಾಕತ್ತು ಇದ್ರೆ ತುಕಾರಾಂ ಸೇರಿ ಹತ್ತು ಶಾಸಕರಿಗೆ ರಾಜೀನಾಮೆ ಕೊಡಿಸಿ. ನಾಳೆಯೇ ಚುನಾವಣೆಗೆ ನಾವು ರೆಡಿ. 10ಕ್ಕೆ 10 ವಿಧಾನಸಭಾ ಕ್ಷೇತ್ರಗಳಲ್ಲಿ ನಿಮ್ಮ ವಿರುದ್ಧ ನಾವು ಗೆದ್ದಿಲ್ಲ ಅಂದ್ರೆ ನಾನು ಜನಾರ್ದನ ರೆಡ್ಡಿಯೇ ಅಲ್ಲ ಎಂದು ಸವಾಲೆಸೆದರು.