Search


ಜನಾರ್ದನ ರೆಡ್ಡಿ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ, ಶ್ರೀರಾಮುಲು ಉಪಾಧ್ಯಕ್ಷ: ಪ್ರದೀಪ್ ಈಶ್ವರ್ ವಾಗ್ದಾಳಿ

ಬೆಂಗಳೂರು: ಜನಾರ್ದನ ರೆಡ್ಡಿ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷರಾಗಿದ್ದು, ಶ್ರೀರಾಮುಲು ಉಪಾಧ್ಯಕ್ಷರಾಗಿದ್ದಾರೆ. ಇಂತಹ ಲೂಟಿಕೋರರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕದ ಜನತೆಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಜನಾರ್ದನ ರೆಡ್ಡಿ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷರಾಗಿದ್ದರೆ, ಶ್ರೀರಾಮುಲು ಅದರ ಉಪಾಧ್ಯಕ್ಷರು” ಎಂದು ವ್ಯಂಗ್ಯವಾಡಿದರು. ಕರ್ನಾಟಕವನ್ನು ಲೂಟಿ ಮಾಡಿದ್ದೇ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಎಂದು ಆರೋಪಿಸಿದ ಪ್ರದೀಪ್ ಈಶ್ವರ್, “ಇಂತಹವರಿಂದ ನಾನು ಪಾಠ ಕಲಿಯಬೇಕಿಲ್ಲ” ಎಂದು ಕಿಡಿಕಾರಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ಹಗರಣ, ಬೋವಿ ನಿಗಮ ಹಗರಣ, ನೀಟ್ ಹಗರಣ, ದೇವರಾಜ್ ಟ್ರಕ್ ಟರ್ಮಿನಲ್ ಹಗರಣ, ಕಿಯೋನಿಕ್ಸ್ ಹಗರಣ, ಪಿಎಸ್‌ಐ ಹಗರಣ, ಪರಶುರಾಮ ಥೀಮ್ ಪಾರ್ಕ್ ಹಗರಣ, ಬಿಟ್‌ಕಾಯಿನ್ ಪ್ರಕರಣ ಹಾಗೂ ಕೆಕೆಆರ್‌ಡಿಬಿ ಅಕ್ರಮ ಸೇರಿದಂತೆ ನೂರಾರು ಕೋಟಿ ರೂಪಾಯಿ ಮೌಲ್ಯದ ಹಗರಣಗಳು ನಡೆದಿವೆ ಎಂದು ಅವರು ಆರೋಪಿಸಿದರು.

“ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಸುಧಾಕರ್, ಜನಾರ್ದನ ರೆಡ್ಡಿ ಹಾಗೂ ಅಶೋಕ್ ಸೇರಿದಂತೆ ಹಲವು ನಾಯಕರ ಅವಧಿಯಲ್ಲಿ ಹಗರಣಗಳು ನಡೆದಿವೆ. ಮೊದಲು ಅವುಗಳಿಗೆ ಉತ್ತರ ನೀಡಲಿ,” ಎಂದು ಸವಾಲು ಹಾಕಿದರು. “ಇಂತಹ ಲೂಟಿಕೋರರಿಂದ ಕಾಂಗ್ರೆಸ್ ಅಥವಾ ನಾನು ಪಾಠ ಕಲಿಯುವ ಅವಶ್ಯಕತೆ ಇಲ್ಲ,” ಎಂದು ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

By Ravikumar - 04-09-2026


Ads in Post