Search


ನ್ಯಾಯಧೀಶರಿಗೆ ಅವಾಚ್ಯ ಪದಗಳಿಂದ ನಿಂದನೆ ; ಸರ್ವೋಚ್ಚ ನ್ಯಾಯಾಲಯದಲ್ಲಿ ಹೈಡ್ರಾಮಾ

 

ನವದೆಹಲಿ: ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಹೈಡ್ರಾಮಾವೇ ನಡೆದು ಹೋಗಿದೆ. ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಮಯದಲ್ಲಿ, ಖುದ್ದಾಗಿ ಹಾಜರಾದ ದೂರುದಾರರೊಬ್ಬರು ಪೀಠದ ಕಡೆಗೆ ದಾಖಲೆಗಳನ್ನು ಎಸೆದು ಅವಾಚ್ಯ ಪದಗಳಿಂದ ಕೂಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಳಿಕ ಅವರನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದರು.

ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠದ ಮುಂದೆ ಈ ಘಟನೆ ನಡೆದಿದೆ. ಅರ್ಜಿದಾರರು ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡುವಾಗ ಏರು ದನಿಯಿಂದ ಪ್ರಾರಂಭಿಸಿ ಕೊನೆಗೆ ವಾಗ್ವಾದಕ್ಕೆ ಕಾರಣವಾಯಿತು. "ಮಾನ್ಯ ನ್ಯಾಯಮೂರ್ತಿಗಳೇ ಎಸಿಪಿ .. ಲಕ್ನೋ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಲು ನಾನು ನಿಮಗೆ ಆದೇಶಿಸುತ್ತೇನೆ" ಎಂದು ದೂರುದಾರರು ತಮ್ಮ ವಾದ ಮಂಡಿಸುವ ಆರಂಭದಲ್ಲಿ ಹೇಳಿದರು. ಈ ಹೇಳಿಕೆಯಿಂದ ಆಶ್ಚರ್ಯಚಕಿತರಾದ ನ್ಯಾಯಮೂರ್ತಿ ವಿಶ್ವನಾಥನ್, "ನೀವು ನನಗೆ ಆದೇಶ ನೀಡುತ್ತಿದ್ದೀರಾ?" ಎಂದು ಕೇಳಿದರು.

ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿದ ದೂರುದಾರರು, "ನನ್ನ ಕಡೆಯಿಂದ ಇಷ್ಟೆಲ್ಲಾ ಆಗಿದೆ. ಎಲ್ಲವೂ ದಾಖಲೆಯಲ್ಲಿದೆ" ಎಂದು ಹೇಳಿದರು. ಇದಾದ ಸ್ವಲ್ಪ ಸಮಯದ ನಂತರ, ಅರ್ಜಿದಾರರು ತಮ್ಮ ಪ್ರಕರಣದ ದಾಖಲೆಗಳನ್ನು ಗಾಳಿಯಲ್ಲಿ ಎಸೆದು, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಅವರನ್ನು ನ್ಯಾಯಾಲಯದ ಕೋಣೆಯಿಂದ ಹೊರಗೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

By Ravikumar - 11-07-2026


Ads in Post