Search


ಜೂನಿಯರ್‌ ದ್ರಾವಿಡ್‌-ಜೂನಿಯರ್‌ ಸೆಹ್ವಾಗ್‌; ಅಪ್ಪನ ಹಾದಿಯಲ್ಲೇ ನಡೆಯುತ್ತಿರುವ ಮಕ್ಕಳು

ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದ ದಿಗ್ಗಜ ಬ್ಯಾಟಿಂಗ್‌ ಜೋಡಿಯಾದ ವೀರೇಂದ್ರ ಸೆಹ್ವಾಗ್‌ ಮತ್ತು ರಾಹುಲ್‌ ದ್ರಾವಿಡ್‌ ಮತ್ತೆ ಒಂದಾಗಿದ್ದಾರೆ, ಆದರೆ ಈ ಬಾರಿ ಇವರ ಬದಲಿಗೆ ಇವರ ಮಕ್ಕಳು ಬ್ಯಾಟ್‌ ಹಿಡಿದು ಮೈದಾನಕ್ಕಿಳಿಯುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧದ ಅಂಡರ್‌-19 ಏಕದಿನ ತಂಡದಲ್ಲಿ ವೀರೇಂದ್ರ ಸೆಹ್ವಾಗ್‌ ʻಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಇಬ್ಬರೂ ಒಟ್ಟಿಗೆ ಸ್ಥಾನ ಪಡೆದಿದ್ದಾರೆ.

ಪ್ರಸ್ತುತ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ, 18 ವರ್ಷದ ಆರ್ಯವೀರ್ ಸೆಹ್ವಾಗ್ ಅವರಿಗೆ ಇದು ಚೊಚ್ಚಲ ಭಾರತ ತಂಡದ ಕರೆಯಾಗಿದೆ. ಮತ್ತೊಂದೆಡೆ, 17 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಅನ್ವಯ್ ದ್ರಾವಿಡ್ ಅವರು ಕಳೆದ ತಿಂಗಳು ಶ್ರೀಲಂಕಾ ಪ್ರವಾಸದಲ್ಲೂ ಭಾರತ ಯು-19 ತಂಡದ ಭಾಗವಾಗಿದ್ದರು. ಅದರಂತೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಆಗುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಏತನ್ಮಧ್ಯೆ, ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಕೂಡ ಈ ಹಿಂದೆ ಯು-19 ತಂಡದಲ್ಲಿ ಆಡಿದ್ದಾರೆ ಎಂಬುದು ಗಮನಾರ್ಹ.

2012ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಕೊನೆಯ ಬಾರಿಗೆ ಒಟ್ಟಿಗೆ ಆಡಿದ್ದರು. ಈಗ 14 ವರ್ಷಗಳ ನಂತರ ಅವರ ಪುತ್ರರು ಅದೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಒಟ್ಟಿಗೆ ಕಣಕ್ಕಿಳಿಯುತ್ತಿದ್ದಾರೆ. ಅದರಲ್ಲೂ, ಸೆಹ್ವಾಗ್ ಮತ್ತು ದ್ರಾವಿಡ್ ಜೋಡಿ, 2006ರ ಪಾಕಿಸ್ತಾನ ವಿರುದ್ಧದ ಲಾಹೋರ್ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಬರೋಬ್ಬರಿ 410 ರನ್‌ಗಳ ಬೃಹತ್ ಜೊತೆಯಾಟವಾಡಿದರು. ಅದನ್ನ ಇಂದಿಗೂ ಅದೆಷ್ಟೋ ಕ್ರಿಕೆಟ್ ಪ್ರಿಯರು ಮರೆತಿಲ್ಲ.

 

By Ravikumar - 29-08-2026


Ads in Post