Search


ಆಹಾರ ಇಲಾಖೆ ಕೊಟ್ಟಿದ್ದಕ್ಕೆ ಕೆ..ಎಚ್‌ ಮುನಿಯಪ್ಪ ಅಸಮಧಾನ : ರಾಹುಲ್‌ ಗಾಂಧಿಗೆ ಕಂಪ್ಲೇಂಟ್‌

ಬೆಂಗಳೂರು: ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಕೆ.ಹೆಚ್‌ ಮುನಿಯಪ್ಪ (KH Muniyappa)  ಕೂಡ ತಮಗೆ ನೀಡಿರುವ ಖಾತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ರಾಜ್ಯಕ್ಕೆ ಆಗಮಿಸಿರುವ ರಾಹುಲ್‌ ಗಾಂಧಿ ಮುಂದೆ ಕೂಡ ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸಂಪುಟದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಸೃಷ್ಟಿಯಾಗಿರುವ ಭಿನ್ನಮತ ಈಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸುಳಿವು ಕಾಣಿಸಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ಸಚಿವ ಸ್ಥಾನದ ರಾಜೀನಾಮೆ ನೀಡಿದ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ಮುಖಂಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ತಮಗೆ ನೀಡಿರುವ ಖಾತೆ ಬಗ್ಗೆ ಬಹಿರಂಗವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

8 ಬಾರಿ ಗೆದ್ದಿದ್ದೇನೆ, ಹಿರಿತನಕ್ಕೆ ಗೌರವ ಕೊಡಿ ಎಂದ ಮುನಿಯಪ್ಪ..!

ಇನ್ನು ಈ ಕುರಿತು ಸಚಿವ ಮುನಿಯಪ್ಪ ಮಾಧ್ಯಮಗಳ ಮುಂದೆ ತಮ್ಮ ಅಸಮಧಾನ ತೋಡಿಕೊಂಡಿದ್ದು, ‘ನಾನು ಈಗಾಗಲೇ 8 ಬಾರಿ ಗೆದ್ದಿರುವ ಹಿರಿಯ ರಾಜಕಾರಣಿ. ಆದರೆ ಖಾತೆ ಹಂಚಿಕೆಯಲ್ಲಿ ನಮ್ಮ ಸೀನಿಯಾರಿಟಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದಲ್ಲಿ ಎಲ್ಲರನ್ನೂ ಸಮತೋಲನವಾಗಿ ನೋಡಬೇಕಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ನಾಯಕರನ್ನೂ ಒಂದೇ ಕಣ್ಣಿನಿಂದ ನೋಡಬೇಕು’ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯ ಗೊಂದಲಗಳು ಪಕ್ಷಕ್ಕೆ ಒಳ್ಳೆಯದಲ್ಲ, ಇಲಾಖೆಗಳ ಹಂಚಿಕೆ ಸರಿಯಾಗಿಲ್ಲದಿದ್ದರೆ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಜೊತೆಗೆ ‘ನಾನು ಇತ್ತೀಚೆಗಷ್ಟೇ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಕೇಳಿಕೊಂಡಿದ್ದೇನೆ. ನನ್ನ ಖಾತೆಯನ್ನು ಶೀಘ್ರದಲ್ಲೇ ಬದಲಾವಣೆ ಮಾಡಿಕೊಡಲಿದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ಮುನಿಯಪ್ಪ ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ, ಮುನಿಯಪ್ಪ ಅವರ ಈ ಬಹಿರಂಗ ಬಂಡಾಯ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

By Ravikumar - 05-06-2026


Ads in Post