ಮಂಡ್ಯ: ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ಗೌಡ ಅವರ ಪುತ್ರಿ ಐಶ್ವರ್ಯ ಕ್ಷಮೆಯಾಚಿಸಿದ್ದಾರೆ. ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ವೀಡಿಯೋ ಮೂಲಕ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.
ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಐಶ್ವರ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಪಾಂಡವಪುರ ತಾಲೂಕಿನ ಉಕ್ಕಡಮ್ಮ ದೇವಸ್ಥಾನಕ್ಕೆ ತೆರಳಿದ್ದರು. ದೇಗುಲದಲ್ಲಿ ಹೆಚ್ಚಿನ ಜನಸಂದಣಿ ಇದ್ದ ಸಂದರ್ಭದಲ್ಲಿ ಗರ್ಭಗುಡಿಗೆ ಪ್ರವೇಶಿಸಿ ದೇವರ ದರ್ಶನ ಪಡೆಯುವ ವಿಚಾರವಾಗಿ ಭದ್ರತಾ ಕರ್ತವ್ಯದಲ್ಲಿದ್ದ ಪಿಎಸ್ಐ ಸವಿತಾ ಪಾಟೀಲ್ ಅವರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಐಶ್ವರ್ಯ ಅವರು ಪಿಎಸ್ಐಗೆ ಕಪಾಳಮೋಕ್ಷ ಮಾಡಿದ್ದಾಗಿ ಆರೋಪಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಹಿನ್ನೆಲೆಯಲ್ಲಿ ಕೋರ್ಟ್ ಕ್ಷಮೆಯಾಚಿಸುವಂತೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಐಶ್ವರ್ಯ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. “ನನ್ನ ಇಬ್ಬರು ಮಕ್ಕಳೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ಮತ್ತು ಮಕ್ಕಳ ತಾಯಿಯಾಗಿರುವ ಹಿನ್ನೆಲೆಯಲ್ಲಿ ದೇವರ ದರ್ಶನ ಪಡೆಯುವ ವೇಳೆ ಮಹಿಳಾ ಪಿಎಸ್ಐ ಅವರೊಂದಿಗೆ ಸಣ್ಣ ಮಾತಿನ ಚಕಮಕಿ ನಡೆಯಿತು. ಉದ್ವೇಗದಲ್ಲಿ ಅಹಿತಕರ ಘಟನೆ ನಡೆದಿದೆ. ಈ ಘಟನೆ ನಡೆಯಬಾರದಿತ್ತು. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕರ್ತವ್ಯದಲ್ಲಿದ್ದ ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ಇದರಿಂದ ನೋವಾಗಿದ್ದರೆ, ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ” ಎಂದು ವೀಡಿಯೋ ಮೂಲಕ ಐಶ್ವರ್ಯ ತಿಳಿಸಿದ್ದಾರೆ.