ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಖ್ಯಾತ ಕ್ರಿಕೆಟಿಗ ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕ್ರಿಕೆಟ್ ದಿಗ್ಗಜರು ಕಳವಳ ವ್ಯಕ್ತಪಡಿಸಿದ್ದಾರೆ, ಜೈಲಿನಲ್ಲಿ ಅನಾರೋಗ್ಯಪೀಡಿತರಾಗಿರುವ ಇಮ್ರಾನ್ ಖಾನ್ ನೆರವಿಗೆ ಜಾಗತಿಕ ಕ್ರಿಕೆಟ್ ಸಮುದಾಯ ಧಾವಿಸಿದ್ದು, ಭಾರತದ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿದಂತೆ 21 ಮಾಜಿ ಅಂತರ್ ರಾಷ್ಟ್ರೀಯ ಕ್ರಿಕೆಟಿಗರು ಪಾಕ್ ಪ್ರಧಾನಿಗೆ ಪತ್ರ ಬರೆದು, ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಖಾನ್ ಆರೋಗ್ಯ ಸ್ಥಿತಿ ಜೈಲಿನಲ್ಲಿ ತೀವ್ರವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದ 21 ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕರು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರಿಗೆ ಜಂಟಿ ಮಾನವೀಯ ಮನವಿ ಪತ್ರವೊಂದನ್ನು ಬರೆದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅವರ ನೇತೃತ್ವದಲ್ಲಿ ಬರೆಯಲಾದ ಈ ಮನವಿ ಪತ್ರದಲ್ಲಿ, ಅದಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ತಕ್ಷಣವೇ ಸೂಕ್ತ ವೈದ್ಯಕೀಯ ಸೌಲಭ್ಯ ಹಾಗೂ ಮಾನವೀಯ ಹಕ್ಕುಗಳನ್ನು ಒದಗಿಸಬೇಕು ಎಂದು ಕೋರಲಾಗಿದೆ. ಇದರ ಜೊತೆ ಕೆಲ ಬೇಡಿಕೆಯನ್ನಿಟ್ಟಿದ್ದಾರೆ.
ಇಮ್ರಾನ್ ಖಾನ್ ಅವರ ವೈಯಕ್ತಿಕ ವೈದ್ಯರನ್ನು ಒಳಗೊಂಡ, ಸುಪ್ರೀಂ ಕೋರ್ಟ್ ನಿರ್ದೇಶಿತ ವೈದ್ಯಕೀಯ ಮಂಡಳಿಯಿಂದ ಸಂಪೂರ್ಣ ಮತ್ತು ಸ್ವತಂತ್ರ ಆರೋಗ್ಯ ತಪಾಸಣೆಗೆ ತಕ್ಷಣ ಅವಕಾಶ ನೀಡಬೇಕು ಎಂದು ಕೋರಿದ್ದು, ವಾರಕೊಮ್ಮೆ ಇಮ್ರಾನ್ ಕುಟುಂಬಸ್ಥರನ್ನ ಭೇಟಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಜೈಲಿನಲ್ಲಿ ಇಮ್ರಾನ್ ಖಾನ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿದೆ. ವಿಶೇಷವಾಗಿ ಅವರು ತಮ್ಮ ಬಲಗಣ್ಣಿನ ಶೇಕಡಾ 85 ರಷ್ಟು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಇದು ಮಾಜಿ ಆಟಗಾರರ ತೀವ್ರ ಕಳವಳಕ್ಕೆ ಕಾರಣವಾಗಿದೆ. “ಕ್ರಿಕೆಟ್ ಮೈದಾನದಲ್ಲಿ ನಮ್ಮ ನಡುವೆ ಇದ್ದ ಬಾಂಧವ್ಯವು ಗಡಿ ಮತ್ತು ದೇಶಗಳ ನಡುವಿನ ವಿವಾದಗಳನ್ನು ಮೀರಿದ್ದಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿರುವ ದಿಗ್ಗಜರು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು 1992ರ ವಿಶ್ವಕಪ್ ವಿಜೇತ ನಾಯಕನಿಗೆ ಕನಿಷ್ಠ ಮಾನವೀಯ ಗೌರವ ಮತ್ತು ಜೀವ ರಕ್ಷಣೆಯ ಹಕ್ಕನ್ನು ನೀಡಬೇಕು ಎಂದು ಪಾಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.