ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ತುರ್ತು ಮಧ್ಯಂತರ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋ ಮಾಡಿದ್ದಾರೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ 76 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ಸೆಪ್ಟೆಂಬರ್ 10ರಂದು ಸಲ್ಲಿಸಿದ್ದ ಜ್ಞಾಪನಾ ಪತ್ರದಲ್ಲಿ 101 ತಾಲೂಕುಗಳಿಗೆ ತಕ್ಷಣದ ಪರಿಹಾರವಾಗಿ ₹3,705.30 ಕೋಟಿ ಆರ್ಥಿಕ ನೆರವು ಕೋರಲಾಗಿತ್ತು. ಇದೀಗ ‘ಬರ ನಿರ್ವಹಣಾ ಕೈಪಿಡಿ-2020’ರ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಮತ್ತಷ್ಟು 76 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಮುಂಗಾರು ಅಂತ್ಯದ ವೇಳೆಗೆ ಬರಪೀಡಿತ ತಾಲೂಕುಗಳ ಸಂಖ್ಯೆ 200 ದಾಟುವ ಸಾಧ್ಯತೆಯಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮಳೆಯ ಕೊರತೆ ಮತ್ತು ತೇವಾಂಶದ ಅಭಾವದಿಂದ ರಾಜ್ಯದಲ್ಲಿ 40 ಲಕ್ಷ ಹೆಕ್ಟೇರ್ಗೂ ಅಧಿಕ ಕೃಷಿ ಪ್ರದೇಶದಲ್ಲಿ ಬೆಳೆ ನಷ್ಟದ ಆತಂಕ ಎದುರಾಗಿದೆ. ಹೆಚ್ಚುವರಿ ತಾಲೂಕುಗಳಲ್ಲಿ ಉಂಟಾಗಿರುವ ಹಾನಿಯ ಸಮೀಕ್ಷೆ ಮುಂದುವರಿದಿದ್ದು, ವರದಿ ಪೂರ್ಣಗೊಂಡ ಬಳಿಕ ಎನ್ಡಿಆರ್ಎಫ್ ಅಡಿಯಲ್ಲಿ ಮತ್ತೊಂದು ಹೆಚ್ಚುವರಿ ಜ್ಞಾಪನಾ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಜೂನ್ನಿಂದ ಆಗಸ್ಟ್ವರೆಗೆ ವಾಡಿಕೆ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ರಾಜ್ಯದ ಹಲವು ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಇದರಿಂದ ಜಲವಿದ್ಯುತ್ ಉತ್ಪಾದನೆ, ಅಂತರ್ಜಲ ಮರುಪೂರಣ ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆಯ ಮೇಲೂ ಪರಿಣಾಮ ಬೀರಿದೆ. ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಆತಂಕ ವ್ಯಕ್ತವಾಗಿದೆ.
ರಾಜ್ಯದ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರದ ಅಂತರ-ಸಚಿವಾಲಯ ಕೇಂದ್ರ ತಂಡ (IMCT) ಭೇಟಿ ನೀಡಿ ವರದಿ ಸಲ್ಲಿಸಿ ಅಂತಿಮ ಅನುಮೋದನೆ ಪಡೆಯುವ ಪ್ರಕ್ರಿಯೆಗೆ ಸಮಯ ಬೇಕಾಗುತ್ತದೆ. ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್ಪುಟ್ ಸಬ್ಸಿಡಿ, ಜಾನುವಾರುಗಳ ರಕ್ಷಣೆ ಹಾಗೂ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ತಕ್ಷಣ ಹಣದ ಅಗತ್ಯವಿದೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕೋರಿರುವ ಪರಿಹಾರ ಮೊತ್ತದ ಶೇ.50ರಷ್ಟು ಹಣವನ್ನು ಅಂತಿಮ ಮೌಲ್ಯಮಾಪನ ಪೂರ್ಣಗೊಳ್ಳುವ ಮೊದಲೇ ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡುವಂತೆ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಇದರೊಂದಿಗೆ ರಾಜ್ಯದ ಪರಿಹಾರ ಕಾರ್ಯಗಳಿಗೆ ನೆರವಾಗಲು ರಾಜ್ಯ ವಿಪತ್ತು ಪರಿಹಾರ ನಿಧಿ (SDRF)ಯ ಎರಡನೇ ಕಂತಿನ ಕೇಂದ್ರದ ಪಾಲನ್ನೂ ಮುಂಚಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.