ಮುಂಬೈ: ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಕ್ಷಣಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬಿದ್ದಿದ್ದು, ಕೊಲೆಗಾತಿ ಸಿಯಾ ಗೋಯಲ್ (Siya Goyal) ತನ್ನ ಬರ್ತಡೇ ದಿನವೇ ಭಾವಿ ಪತಿಯನ್ನ ಹತ್ಯೆಗೈದಿದ್ದಳು, ಆದರೆ ಸೊಸೆ ಇಂತಹ ಕೆಲಸ ಮಾಡುವಳೆಂದು ಪರಿವೇ ಇಲ್ಲದ ಕೇತನ್ ತಂದೆ ಸೊಸೆಯ ಹುಟ್ಟುಹಬ್ಬ ಆಚರಿಸಲು ಫೈವ್ ಸ್ಟಾರ್ ಹೋಟೆಲ್‌ವೊಂದರಲ್ಲಿ ತಯಾರಿ ಮಾಡಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಿಯಕರನ ಜೊತೆ ಬಾಳಲು ಅಡ್ಡಿಯಾಗಿದ್ದ ಕೇತನ್‌ನನ್ನು ಸಿಯಾ ಜೂನ್ 18ರಂದು ಲೋಹಗಡ್ ಕೋಟೆಯ ಮೇಲಿಂದ ದೂಡಿ ಹತ್ಯೆ ಮಾಡಿದ್ದಳು. ಈ ಹತ್ಯೆಗೆ ಸಿಯಾಳ ಪ್ರಿಯಕರ ಚೇತನ್ ಕೂಡ ಸಾಥ್ ಕೊಟ್ಟಿದ್ದನು. ಆದರೆ ಸೊಸೆಯ ಈ ಕ್ರೂರತೆಯನ್ನ ಅರಿಯದ ಕೇತನ್ ತಂದೆ ಸಿಯಾಳ ಬರ್ತಡೇ ಆಚರಿಸಲು ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದರು ಎಂದು ತಿಳಿದು ಬಂದಿದೆ.
ಸೊಸೆಗಾಗಿ ಫೈವ್ ಸ್ಟಾರ್ ಹೋಟೆಲ್ ಬುಕ್ ಮಾಡಿದ್ದ ಮಾವ..!
ಕೊಲೆಗಾರ್ತಿ ಸಿಯಾ ಗೋಯಲ್ ಹುಟ್ಟುಹಬ್ಬವನ್ನು ಜೂನ್. 20ರಂದು ಮಹಾರಾಷ್ಟ್ರದ ಗಿರಿಧಾಮ, ಮಹಾಬಲೇಶ್ವರದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಸೆಲೆಬ್ರೇಟ್ ಮಾಡಲು ಕೇತನ್ (Ketan Agarwal) ತಂದೆ ವಿಶಾಲ್ ಅಗರ್ವಾಲ್ ಯೋಜಿಸಿದ್ದರು. ಇದಕ್ಕಾಗಿ ಹೋಟೆಲ್‌ನ 70 ಕೊಠಡಿಗಳನ್ನು ಬುಕ್ ಮಾಡಿದ್ದರು. ಆದರೆ, ಆರೋಪಿತೆ ಸಿಯಾ, ಕೇತನ್ ಜೊತೆ ಮಾತನಾಡಿ ಬರ್ತ್‌ಡೇ ಕಾರ್ಯಕ್ರಮ ರದ್ದುಗೊಳಿಸಿ ಪುಣೆ ಬಳಿಯ ಲೋಹಗಡ್ ಕೋಟೆಗೆ ಇಬ್ಬರೇ ಹೋಗೋಣ ಅಂತ ಮನವೊಲಿಸಿದ್ದಳು ಎಂದು ಕೇತನ್ ತಂದೆ ತಮ್ಮ ದುಖಃ ತೋಡಿಕೊಂಡಿದ್ದಾರೆ.
ಇದೇ ನವೆಂಬರ್‌ನಲ್ಲಿ ಕೇತನ್ ಮತ್ತು ಸಿಯಾಳ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ಎರಡು ಕುಟುಂಬಗಳು ಈಗಿನಿಂದಲೇ ತಯಾರಿ ಆರಂಭಿಸಿದ್ದವು. ರಾಜಸ್ಥಾನದಲ್ಲಿ ಮದುವೆಗಾಗಿ 17 ಕೋಟಿ ಕೊಟ್ಟು ಅರಮನೆಯನ್ನ ಬುಕ್ ಮಾಡಿಲಾಗಿತ್ತು. ಆಗಮಿಸುವ ಅಥಿತಿಗಳ ಸಂಚಾರಕ್ಕಾಗಿ ಎರಡು ಖಾಸಗಿ ವಿಮಾನವನ್ನು ಬುಕ್ ಮಾಡಲಾಗಿತ್ತು. ಆದರೆ ಸಿಯಾಳ ಪ್ರೀತಿ ಇಂದು ಎರಡು ಕುಟುಂಬವನ್ನ ಶೋಕದ ಕಡಲಲ್ಲಿ ಮುಳುಗಿಸಿದೆ.