ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಮಾಫಿ ಸಾಕ್ಷಿಯಾಗಲು ನಿರ್ಧರಿಸಿರುವ ಪ್ರದೋಷ್ ರಾವ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಸೋಮವಾರ ನಡೆಯಿತು. 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಭದ್ರತೆಯೊಂದಿಗೆ ಹಾಜರಾದ ಪ್ರದೋಷ್, ಸುಮಾರು ಮೂರು ಗಂಟೆಗಳ ಕಾಲ ಇನ್ ಕ್ಯಾಮೆರಾ ವಿಚಾರಣೆಯಲ್ಲಿ ಹೇಳಿಕೆ ದಾಖಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಹಲವು ಘಟನೆಗಳು ಮತ್ತು ಮಾಹಿತಿಗಳನ್ನು ನ್ಯಾಯಾಲಯದ ಮುಂದೆ ವಿವರಿಸಿದ್ದಾರೆ.
ಪ್ರದೋಷ್ ಅವರ ಸುದೀರ್ಘ ಹೇಳಿಕೆಯನ್ನು ಮುದ್ರಿಸಿ, ಅವರ ಸಹಿ ಪಡೆಯಬೇಕಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ. ಎಸ್‌ಪಿಪಿ ಪ್ರಸನ್ನಕುಮಾರ್ ಅವರ ಮನವಿಯನ್ನೂ ಕೋರ್ಟ್ ಪರಿಗಣಿಸಿದೆ. ಇದೇ ವೇಳೆ ದರ್ಶನ್ ಪರ ವಕೀಲರು ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದು, ಇದಕ್ಕೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಪರ ವಕೀಲರು ತ್ವರಿತ ವಿಚಾರಣೆಗೆ ಸಹಕರಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿರುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ತಮ್ಮ ಹೇಳಿಕೆಯಲ್ಲಿ ದರ್ಶನ್ ಅವರೊಂದಿಗಿನ ಹಳೆಯ ಪರಿಚಯದ ಬಗ್ಗೆಯೂ ಪ್ರದೋಷ್ ಮಾಹಿತಿ ನೀಡಿದ್ದಾರೆ. 2003ರಲ್ಲಿ ಕ್ರಿಕೆಟ್ ಆಡಲು ತೆರಳುತ್ತಿದ್ದ ಸಂದರ್ಭದಲ್ಲಿ ದರ್ಶನ್ ಪರಿಚಯವಾಗಿದ್ದು, ಕಾಲಕ್ರಮೇಣ ಇಬ್ಬರ ನಡುವೆ ಆತ್ಮೀಯ ಸ್ನೇಹ ಬೆಳೆದಿತ್ತು ಎಂದು ಹೇಳಿದ್ದಾರೆ. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ವಾರಾಂತ್ಯದ ರಜಾದಿನಗಳಲ್ಲಿ ದರ್ಶನ್ ಅವರನ್ನು ಭೇಟಿಯಾಗುತ್ತಿದ್ದೆ. ಕಾರ್ಯಕ್ರಮಗಳಿದ್ದಾಗ ಅವರ ಮನೆಗೂ ತೆರಳುತ್ತಿದ್ದೆ ಎಂದು ತಿಳಿಸಿದ್ದಾರೆ.
2024ರ ಜೂನ್ 8ರಂದು ರಜೆ ಇದ್ದ ಕಾರಣ ಗಿರಿನಗರದ ಮನೆಯಿಂದ ಬೈಕ್‌ನಲ್ಲಿ ದರ್ಶನ್ ಅವರ ಐಡಿಯಲ್ ಹೋಮ್ಸ್ ನಿವಾಸಕ್ಕೆ ತೆರಳಿದ್ದಾಗಿ ಪ್ರದೋಷ್ ಹೇಳಿದ್ದಾರೆ. ಆ ವೇಳೆ ದರ್ಶನ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಅವರ ತರಬೇತುದಾರ ಹೇಮಂತ್ ಕೂಡ ಅಲ್ಲಿದ್ದರು. ದರ್ಶನ್ ಅವರೊಂದಿಗೆ ಶೂಟಿಂಗ್ ಕುರಿತು ಸುಮಾರು 15 ನಿಮಿಷ ಮಾತನಾಡಿದ ಬಳಿಕ, ಮಗಳನ್ನು ಸ್ವಿಮ್ಮಿಂಗ್‌ಗೆ ಕರೆದುಕೊಂಡು ಹೋಗಬೇಕಿರುವುದರಿಂದ ಮನೆಗೆ ತೆರಳುವುದಾಗಿ ತಿಳಿಸಿದ್ದೆ. ಆದರೆ, ವಿನಯ್ ಅವರ ಸ್ಟೋನಿ ಬ್ರೂಕ್‌ನಲ್ಲಿ ಪಾರ್ಟಿ ಇರುವುದರಿಂದ ಬರುವಂತೆ ದರ್ಶನ್ ಒತ್ತಾಯಿಸಿದರು ಎಂದು ಹೇಳಿದ್ದಾರೆ.
ದರ್ಶನ್ ಅವರ ಒತ್ತಾಯದ ಮೇರೆಗೆ ಪಾರ್ಟಿಗೆ ತೆರಳಲು ಒಪ್ಪಿಕೊಂಡು, ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಮತ್ತೆ ದರ್ಶನ್ ಅವರ ಮನೆಗೆ ಬಂದಿದ್ದಾಗಿ ಪ್ರದೋಷ್ ತಿಳಿಸಿದ್ದಾರೆ. ಅಲ್ಲಿಂದ ನಾಗರಾಜ್ ಕೂಡ ಕಾರಿನಲ್ಲಿ ಸೇರಿಕೊಂಡರು. ಬಳಿಕ ಆರ್.ಆರ್.ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಕಾರಿನಲ್ಲೇ ದರ್ಶನ ಪಡೆದ ನಂತರ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ತೆರಳಿದ್ದಾಗಿ ಅವರು ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.