Search


KPSC ಅಕ್ರಮ; ಲಂಚದ ಹಣದಲ್ಲಿ ಗರ್ಲ್‌ ಫ್ರೆಂಡ್‌ಗೆ ಚಿನ್ನ ಕೊಡಿಸಿದ್ದ ಅಧಿಕಾರಿ ಗ್ಯಾನೇಂದ್ರ ಕುಮಾರ್

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧದ ಸಿಐಡಿ ತನಿಖೆಯಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಜ್ಞಾನೇಂದ್ರ ಕುಮಾರ್ ತಮ್ಮ ಗೆಳತಿಗೆ ಸುಮಾರು ₹26 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿಕೊಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಗೆಳತಿಯನ್ನು ಕರೆದೊಯ್ದು ಆಭರಣ ಖರೀದಿಸಿದ್ದು, ‘ಬಸವರಾಜ್’ ಎಂಬ ಹೆಸರಿನ ಖಾತೆಯಿಂದ ಬಿಲ್ ಪಾವತಿಸಲಾಗಿದೆ. ಬೀದರ್‌ನ ಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಖಾತೆಯಿಂದ ಈ ಹಣ ಪಾವತಿಯಾಗಿರುವುದು ಪತ್ತೆಯಾಗಿದ್ದು, ಆಭರಣ ಖರೀದಿಗೆ ಸಂಬಂಧಿಸಿದ ಬಿಲ್ ಅನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಇದರ ಬೆನ್ನಲ್ಲೇ, ಜ್ಞಾನೇಂದ್ರ ಕುಮಾರ್ ಅವರು ಅಕ್ರಮ ಹಣದಲ್ಲಿ ತಮ್ಮ ಸಹೋದರನ ಹೆಸರಿನಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿರುವ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಲ್ಲಾ ಖರೀದಿಸಿರುವ ಬಗ್ಗೆ ಸಿಐಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಕ್ರಮ ಹಣದ ವಹಿವಾಟಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು, ಆಸ್ತಿ ಖರೀದಿ ದಾಖಲೆಗಳು ಹಾಗೂ ಹಣದ ಮೂಲದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಜ್ಞಾನೇಂದ್ರ ಕುಮಾರ್ ಅವರು ತಮ್ಮ ಗೆಳತಿಯೊಂದಿಗೆ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಖರೀದಿಸುತ್ತಿರುವ ಸಂದರ್ಭದ ಫೋಟೋ ಸೇರಿದಂತೆ ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯವೂ ಮುಂದುವರಿದಿದೆ.

ಜ್ಞಾನೇಂದ್ರ ಕುಮಾರ್ ಅವರು 2024ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅಕ್ರಮವಾಗಿ ಹಣ ಸಂಪಾದಿಸಿ ಚಿನ್ನಾಭರಣ ಮತ್ತು ಆಸ್ತಿ ಖರೀದಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಕ್ರಮ ಹಣದ ಮೂಲವೇನು, ಯಾವ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ ಮತ್ತು ಖರೀದಿಸಿರುವ ಆಸ್ತಿಗಳಿಗೆ ಹಣ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆಹಚ್ಚಲು ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆಸ್ತಿ ಹಾಗೂ ಹಣಕಾಸು ವಹಿವಾಟುಗಳ ಮಾಹಿತಿ ಹೊರಬರುವ ಸಾಧ್ಯತೆಯಿದ್ದು, ಸಿಐಡಿ ತನಿಖೆ ಮುಂದುವರಿದಿದೆ.

By Ravikumar - 12-09-2026


Ads in Post