Search


KPSC ಹಗರಣ; 40 ಲಕ್ಷಕ್ಕೆ ಪೇಪರ್ ಲೀಕ್ ಮಾಡಿದ್ದ ಬಿಜೆಪಿ ಮುಖಂಡ ಅರೆಸ್ಟ್

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಬಂಧನದ ನಂತರ ಮಧ್ಯವರ್ತಿ, ಬಿಜೆಪಿ ಮುಖಂಡ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿದ್ದಾರೆ.

ಬಸವರಾಜ್ ಕನ್ನಾಳೆ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ನಿವಾಸಿಯಾಗಿದ್ದು, ಭಾನುವಾರ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬಂಧನದ ಬಳಿಕ ಭಾಲ್ಕಿಯ ಡೋಣಗಾಪುರದಲ್ಲಿರುವ ಅವರ ನಿವಾಸ ಹಾಗೂ ಭಾಲ್ಕಿ ನಗರದ ಲೆಕ್ಚರರ್ಸ್ ಕಾಲನಿಯಲ್ಲಿರುವ ಮನೆಗೆ ಸಿಐಡಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಬಂಧಿತ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಮತ್ತು ಬಸವರಾಜ್ ಕನ್ನಾಳೆ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಸಲುವಾಗಿ ಇಬ್ಬರನ್ನು ಸೆಪ್ಟೆಂಬರ್ 9ರವರೆಗೆ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಸಿಐಡಿ ತನಿಖೆ ವೇಳೆ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಪರೀಕ್ಷೆಗಳ ಉಸ್ತುವಾರಿ ಮತ್ತು ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಅವರ ಪಾತ್ರದ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ತಲಾ 40 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಬಸವರಾಜ್ ಕನ್ನಾಳೆ ಕಾರ್ಯನಿರ್ವಹಿಸಿದ್ದಾರೆಯೇ ಎಂಬ ಬಗ್ಗೆಯೂ ಸಿಐಡಿ ತನಿಖೆ ನಡೆಸುತ್ತಿದೆ.

ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಯತ್ನ ನಡೆದಿರುವ ಅನುಮಾನವೂ ವ್ಯಕ್ತವಾಗಿದೆ. ಓಎಂಆರ್ ಶೀಟ್‌ಗಳಲ್ಲಿ ತಿದ್ದುಪಡಿ ನಡೆಸುವುದು ಹಾಗೂ ಸ್ಟ್ರಾಂಗ್ ರೂಮ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪಗಳ ಬಗ್ಗೆಯೂ ಸಿಐಡಿ ತನಿಖೆ ಮುಂದುವರಿಸಿದೆ. ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಸಿಐಡಿ ವಶದಲ್ಲಿರುವ ಇಬ್ಬರು ಆರೋಪಿಗಳ ವಿಚಾರಣೆಯಿಂದ ಮತ್ತಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.

By Ravikumar - 31-08-2026


Ads in Post