ಹುಬ್ಬಳ್ಳಿ: ರಾಜ್ಯ ಸರ್ಕಾರ ಒಂದೆಡೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರಿ ಬಸ್ಗಳ ನಿರ್ವಹಣಾ ವ್ಯವಸ್ಥೆಯೇ ಪ್ರಶ್ನಾರ್ಥಕವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮಾರ್ಗಮಧ್ಯೆ ಬಸ್ನ ಹೆಡ್ಲೈಟ್ ಕೈಕೊಟ್ಟ ಪರಿಣಾಮ, ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದಲೇ ಬಸ್ ಸಂಚರಿಸಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟಿದ್ದ ಬಸ್, ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಹೆಡ್ಲೈಟ್ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೆಡ್ಲೈಟ್ ದುರಸ್ತಿಯಾಗದ ಹಿನ್ನೆಲೆ, ಬಸ್ನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ಗಳ ಟಾರ್ಚ್ಗಳನ್ನು ಆನ್ ಮಾಡಿ ಚಾಲಕನಿಗೆ ಬೆಳಕು ನೀಡಿದ್ದಾರೆ. ಇದೇ ಬೆಳಕಿನ ಸಹಾಯದಿಂದ ಬಸ್ ಸಂಶಿಯಿಂದ ಗುಡಗೇರಿ ಮಾರ್ಗವಾಗಿ ಅತ್ತಿಗೇರಿವರೆಗೆ ಸಂಚರಿಸಿದೆ ಎಂದು ತಿಳಿದುಬಂದಿದೆ.
ರಾತ್ರಿ ವೇಳೆ ಹೆಡ್ಲೈಟ್ ಇಲ್ಲದೆ ಸರ್ಕಾರಿ ಬಸ್ ಸಂಚರಿಸಿರುವುದು ಪ್ರಯಾಣಿಕರ ಸುರಕ್ಷತೆ ಕುರಿತು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಸರ್ಕಾರ, ಬಸ್ಗಳ ಸಮರ್ಪಕ ನಿರ್ವಹಣೆ ಮತ್ತು ಪ್ರಯಾಣಿಕರ ಸುರಕ್ಷತೆಯತ್ತಲೂ ಗಮನಹರಿಸಬೇಕಿದೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.