Search


ಕಾಕ್ರೋಚ್ ಪ್ರತಿಭಟನೆ ವೇಳೆ ಲಾಠಿಚಾರ್ಜ್: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್

ದೆಹಲಿ : ಜುಲೈ 20ರಂದು ಸಂಸತ್ ಚಲೋ ಪ್ರತಿಭಟನೆಯ ವೇಳೆ ಸಿಜೆಪಿ (CJP) ಪ್ರತಿಭಟನಾಕಾರರ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ. ಈ ಕುರಿತಂತೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ ನಡೆಸಿದ ನ್ಯಾಯಾಲಯವು, ಸಂಬಂಧಪಟ್ಟ ಅಧಿಕಾರಿಗಳಿಗೆ ಉತ್ತರ ಸಲ್ಲಿಸುವಂತೆ ಸೂಚಿಸಿದೆ. 

ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ, ಅತಿಯಾದ ಬಲಪ್ರಯೋಗ, ಮಹಿಳಾ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಅರ್ಜಿಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಹೈಕೋರ್ಟ್, ಪ್ರತಿಭಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಗಳು, ಬಾಡಿ-ಕ್ಯಾಮೆರಾ ದೃಶ್ಯಗಳು ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಯಾವುದೇ ಕಾರಣಕ್ಕೂ ಅಳಿಸಬಾರದು ಎಂದು ಸಂರಕ್ಷಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. 

ಇದೇ ವೇಳೆ, ಈ ಘಟನೆಗಳನ್ನು ಪ್ರತ್ಯೇಕ ಘಟನೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ತಮ್ಮ ನಿಲುವನ್ನು ವಿವರಿಸುವಂತೆ ಸೂಚಿಸಿದೆ. ಮತ್ತೊಂದೆಡೆ, ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ನಡೆಸಿದ ಆರೋಪವನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಆರೋಪಗಳು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ನೀಟ್ ಹಗರಣದ ಕುರಿತು ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ, ಇದೀಗ ಇಡೀ ದೇಶವ್ಯಾಪ್ತಿ ಹಬ್ಬಿದ್ದು, ಬೆಂಗಳೂರು, ಹೈದರಾಬಾದ್, ಜೈಪುರ್ , ರಾಯ್ ಪುರ, ಪಾಟ್ನಾ, ಪುಣೆ, ಮುಂಬೈ ಸೇರಿದಂತೆ ದೇಶದ ಆನೇಕ ಪ್ರಮುಖ ನಗರದಲ್ಲಿ ಪ್ರತಿಭಟನೆ ಕಿಚ್ಚು ವ್ಯಾಪಿಸಿದೆ. ಇನ್ನು ಅಧಿವೇಶನದಲ್ಲಿ ಈ ಕುರಿತು ಚರ್ಚೆ ಅವಕಾಶ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ವಿಪಕ್ಷಗಳಿಗೆ ಸೂಚಿಸಿದೆ.

By Ravikumar - 22-07-2026


Ads in Post