Search


ರಾಹುಲ್‌ ಮನುಸ್ಮೃತಿಗೆ ಕಳಂಕ ತಂದಿದ್ದಾರೆ ಎಂದು ದೂರು ದಾಖಲಿಸಿದ ವಕೀಲೆ ನಾಜಿಯಾ ಖಾನ್‌

ನವದೆಹಲಿ: ಮನುಸ್ಮೃತಿ ಕುರಿತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಾಜಿಯಾ ಖಾನ್‌ ಎಂಬ ಸುಪ್ರೀಂ ಕೋರ್ಟ್‌ ವಕೀಲರು ದೂರು ದಾಖಲಿಸಿದ್ದಾರೆ, ಪ್ರಾಚೀನ ಗ್ರಂಥದಿಂದ ಆಯ್ದ ಭಾಗಗಳನ್ನು ಮಾತ್ರ ಎತ್ತಿಹಿಡಿದು, ತಿರುಚಿ ಪ್ರಸ್ತುತಪಡಿಸುವ ಮೂಲಕ ಮನುಸ್ಮೃತಿಗೆ ಕಳಂಕ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಆಗಸ್ಟ್ 22ರಂದು ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಬಾಲ್ಯದಲ್ಲಿ ಹೆಣ್ಣು ತಂದೆಗೆ ಸೇರಿದವಳು, ಯೌವನದಲ್ಲಿ ಗಂಡನಿಗೆ ಸೇರಿದವಳು, ಪತಿ ತೀರಿಕೊಂಡಾಗ ಮಕ್ಕಳಿಗೆ ಸೇರಿದವಳು, ಆಕೆ ಎಂದಿಗೂ ಸ್ವತಂತ್ರಳಾಗಿರಬಾರದು ಎಂದು ಮನುಸ್ಮೃತಿ ಹೇಳುತ್ತದೆ. ಇಂತಹ ಮಾತುಗಳು ನಾಚಿಕೆಗೇಡು, ಇಂತಹ ಮಾತುಗಳನ್ನು ಎಂದಿಗೂ ಹೇಳಬಾರದಿತ್ತು” ಅಲ್ಲದೆ, ಮಹಿಳೆಯರಿಗೆ ಸ್ವತಂತ್ರವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಕ್ಕಿದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಕೀಲೆ ನಾಜಿಯಾ ಖಾನ್‌ ಇದೀಗ ರಾಹುಲ್‌ ಗಾಂಧಿ ವಿರುದ್ಧ ದೂರು ಸಲ್ಲಿಸಿದ್ದಾರೆ, ಈ ಕುರಿತು ಮಾಧ್ಯಮ ಸಂಸ್ಥೆ ಜೊತೆ ಮಾತನಾಡಿರುವ ಅವರು ʻನಾನು ಕಲ್ಮಾ ಮತ್ತು ಶಹಾದಾ ಎರಡನ್ನೂ ಪಠಿಸುತ್ತೇನೆ. ಜೊತೆಗೆ ‘ವಂದೇ ಮಾತರಂ’ ಹಾಡುವಾಗ ನಾನೊಬ್ಬಳು ಖಾನ್ ಆಗಿದ್ದರೂ ನನ್ನ ಬಗ್ಗೆ ನನಗೇ ಅಪಾರ ಹೆಮ್ಮೆ ಅನಿಸುತ್ತದೆ. ರಾಹುಲ್ ಗಾಂಧಿ ಕೇವಲ ಒಂದೇ ಅಧ್ಯಾಯವನ್ನು ಆಯ್ದುಕೊಂಡು, ಪದಗಳನ್ನು ತಿರುಚಿ, ಮನುಸ್ಮೃತಿಗೆ ಅಪಖ್ಯಾತಿ ತರುವ ಪ್ರಯತ್ನ ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.

ವಾಕ್‌ ಸ್ವತಂತ್ರ್ಯವಿದೆ ಎಂಬ ಮಾತ್ರಕ್ಕೆ ರಾಹುಲ್‌ ಗಾಂಧಿ ತಮಗೆ ತೋಚಿದ್ದನ್ನ ಮಾತನಾಡಿದ್ದಾರೆ, ಅಷ್ಟೇ ಅಲ್ಲದೇ ಪ್ರಧಾನಿ ಮೋದಿ, ಯೋಗಿ ಆದಿತ್ಯನಾತ್‌, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಪ್ರಶ್ನಿಸಿದ್ದಾರೆ, ಬಿಜೆಪಿ ಸರ್ಕಾರ ಬಂದ ನಂತರ ಪ್ರತಿಯೊಬ್ಬರೂ ಮನುಸ್ಮೃತಿ ಓದಬೇಕು ಅಥವಾ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಎಂದಾದರೂ ಹೇಳಿದ್ದಾರೆಯೇ? ಅವರು ಈ ರೀತಿ ಏಕೆ ಮಾಡಿದರು ಎಂಬುದಕ್ಕೆ ಉತ್ತರಿಸಬೇಕಾಗುತ್ತದೆ” ಎಂದು ಖಾನ್ ಹೇಳಿದ್ದಾರೆ. 

By Ravikumar - 28-08-2026


Ads in Post