Search


ವಿಜಯೇಂದ್ರರನ್ನ ಕಿತ್ತೆಸೆದು ಉತ್ತಮರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡೋಣ ; ಬಿಜೆಪಿಯಲ್ಲಿ ಬಿರುಗಾಳಿ..!

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (Karnataka BJP) ಮತ್ತೆ ನಾಯಕಯತ್ವ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ‌ರನ್ನು (BY VIjayendra) ಕೆಳಗಿಳಿಸಲು ದೆಹಲಿ ನಾಯಕರಲ್ಲಿ ಒತ್ತಾಯ ಮಾಡಿರುವ ಡಿವಿ ಸದಾನಂದ ಗೌಡ (DV Sadanandagowda) ಅವರದ್ದು ಎನ್ನಲಾದ ಆಡಿಯೋ ವೈರಲ್ (Audio Viral) ಆಗಿದೆ. ಬಿಜೆಪಿ ಕಾರ್ಯದರ್ಶಿ ಪ್ರದೀಪ್‌ ಭಂಡಾರಿ ಅವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಿ.ವೈ ವಿಜಯೇಂದ್ರ ಅವರನ್ನ ರಾಜ್ಯಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಭಾರೀ ತಯಾರಿ ನಡೆಸಲಾಗುತ್ತಿದೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ . ಇದೇ ಸಂದರ್ಭದಲ್ಲಿ ದೆಹಲಿ ಮಟ್ಟದ ನಾಯಕರೊಬ್ಬರ ಜೊತೆಗೆ ಡಿವಿ ಸದಾನಂದ ಗೌಡ ಅವರು ಮಾತನಾಡಿದ್ದಾರೆ ಎಂಬ ಆಡಿಯೋ ಹೊರಬಂದಿದ್ದು, ಡಿವಿ ಸದಾನಂದಗೌಡ ಅವರ ಧ್ವನಿಯನ್ನೇ ಹೋಲುವಂತಹ ಆಡಿಯೋ ಇದಾಗಿದೆ. ಹೀಗಾಗಿ ಸದ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

 ವೈರಲ್‌ ಆಡಿಯೋದಲ್ಲೇನಿದೆ?

ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ವಿಜಯೇಂದ್ರ‌ ಮುಂದುವರೆಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂಬುವುದು ಆಡಿಯೋದಲ್ಲಿ ಉಲ್ಲೇಖವಾಗಿದೆ. ಈಗಲೇ ತೆಗೆದು ಹಾಕಿದ್ರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಅಂತ ಟೀಕೆಗೆ ಗುರಿ ಆಗುವ ಅಪಾಯ ಇದೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಮುಂದಿನ ಅಕ್ಟೋಬರ್ ವರೆಗೂ ಕಾದು ವಿಜಯೇಂದ್ರ‌ ಅವರನ್ನು ಪದವಿಯಿಂದ ತೆಗೆಯುವಂತೆ ಮನವಿ ಮಾಡಲಾಗಿದೆ.


ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗೊಂದಲ ಮಾಡಿಕೊಳ್ಳುವುದು ಯಾಕೆ? ಎರಡು ತಿಂಗಳ ಒಳಗಾಗಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕಾಗಿದೆ. ಎರಡು ತಿಂಗಳಲ್ಲಿ ಅವರ ಅವಧಿ ಕೂಡಾ ಮುಕ್ತಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾರೂ ಇದನ್ನು ಪ್ರಶ್ನೆ ಮಾಡುವುದಿಲ್ಲ. ಪಕ್ಷದಲ್ಲಿ ಮುಂದುವರಿಯಬೇಕೆಂದು ಯಾವುದೇ ಷರತ್ತು ಇಲ್ಲ. ಹಾಗಾಗಿ ಯೋಜನಾಬದ್ಧವಾಗಿ ಅಕ್ಟೋಬರ್‌ನಲ್ಲಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ. ಈ ಕೆಲಸ ಮಾಡಿದರೆ, ಲಿಂಗಾಯತರು ಸ್ವಲ್ಪ ವಿರೋಧ ಮಾಡಬಹುದು. ಆದರೆ ಯೋಗ್ಯರನ್ನು ನಾವು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಎಲ್ಲಾ ವಿರೋಧಗಳು ತಣ್ಣಗಾಗಲಿದೆ. ಇದು ನನ್ನ ಅಭಿಪ್ರಾಯವಾಗಿದೆ.

ಬೇರೆ ಉತ್ತಮ ಅವಕಾಶಗಳು ಇದ್ದರೆ ನಾನು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನನ್ನು ಜನರು ಒಪ್ಪಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡರೂ 25-30 ಆಟೋ ಚಾಲಕರು ಬಂದು ಮಾತನಾಡಿಸುತ್ತಾರೆ. ನಾನು ಆ ರೀತಿಯ ಸಂಪರ್ಕ ಇಟ್ಟಿದ್ದೇನೆ ಎಂದು ಪ್ರದೀಪ್ ಎಂಬುವವರ ಜೊತೆಗೆ ಮಾತನಾಡಿದ ಆಡಿಯೋನಲ್ಲಿದೆ.

By Ravikumar - 29-06-2026


Ads in Post