ಉತ್ತರ ಪ್ರದೇಶದ ಮುಸ್ಲಿಂ ಧರ್ಮಗುರು ಮೌಲಾನಾ ಜಾರ್ಜಿಸ್ ಅನ್ಸಾರಿ ಅವರು, "ಹಿಂದೂಗಳ ಆರಾಧ್ಯ ದೈವ ಶ್ರೀಕೃಷ್ಣ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು" ಎಂದು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದೇ ವೇಳೆ, "ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖುರಾನ್ ಓದಿದರೆ ಇಸ್ಲಾಂ ಧರ್ಮವನ್ನು ಪ್ರೀತಿಸಲು ಆರಂಭಿಸುತ್ತಾರೆ" ಎಂಬ ಹೇಳಿಕೆಯನ್ನೂ ಅವರು ನೀಡಿದ್ದಾರೆ.
ಈ ಹೇಳಿಕೆಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿವಿಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಲಖನೌದಲ್ಲಿ ಹಿಂದೂ ಮಹಾಸಭಾ ಕಾರ್ಯಕರ್ತರು ಮೌಲಾನಾ ಅವರ ಭಾವಚಿತ್ರವನ್ನು ತುಳಿದು ಪ್ರತಿಭಟನೆ ನಡೆಸಿ, ಅವರ ವಿರುದ್ಧ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಂತೆ ದೂರು ಸಲ್ಲಿಸಿದ್ದಾರೆ.
ಅಯೋಧ್ಯೆಯ ಸ್ವಾಮೀಜಿ ವಿಷ್ಣು ದಾಸ್ ಅವರು ಮೌಲಾನಾ ಹೇಳಿಕೆಯನ್ನು ಖಂಡಿಸಿದ್ದು, "ಮೌಲಾನಾ ಜಾರ್ಜಿಸ್ ಅನ್ಸಾರಿ ಅವರ ನಾಲಿಗೆಯನ್ನು ಕತ್ತರಿಸಿ ತರುವವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು" ಎಂದು ಘೋಷಿಸಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.ಇತ್ತೀಚೆಗೆ ಜಾರ್ಖಂಡ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೌಲಾನಾ ಜಾರ್ಜಿಸ್ ಅನ್ಸಾರಿ, "ಶ್ರೀಕೃಷ್ಣ ಇಸ್ಲಾಂ ಧರ್ಮದ ಪ್ರವಾದಿಯಾಗಿದ್ದರು ಮತ್ತು ಅವರು ಪ್ರತಿದಿನ ನಮಾಜ್ ಮಾಡುತ್ತಿದ್ದರು" ಎಂದು ಹೇಳಿದ್ದರು.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, "ಹಿಂದೆಯೂ ಕೆಲ ಧರ್ಮಗುರುಗಳು ಹಿಂದೂ ದೇವತೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ..