Search


ಬಾಡಿಗೆ ಮನೆ ಸಿಕ್ತಿದ್ದಂಗೆ ಮನೆ ಖಾಲಿ ಮಾಡ್ತೀನಿ; ಸಚಿವರಿಗೆ ಮನೆ ಬಿಟ್ಟು ಕೊಡ್ತೀನಿ ಎಂದ ಮಹದೇವಪ್ಪ

ಬೆಂಗಳೂರು: ಬಾಡಿಗೆ ಮನೆ ಸಿಕ್ಕ ತಕ್ಷಣ ಕ್ರೆಸೆಂಟ್ ರಸ್ತೆಯಲ್ಲಿರುವ ಹಳೆಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುತ್ತೇನೆ ಎಂದು ಮಾಜಿ ಸಚಿವ ಮಹದೇವಪ್ಪ ತಿಳಿಸಿದ್ದಾರೆ. ನಗರದ ಕ್ರೆಸೆಂಟ್ ರಸ್ತೆಯ ನಂ. 2 ಸರ್ಕಾರಿ ನಿವಾಸ ತೆರವು ಹಾಗೂ ನವೀಕರಣ ಕಾಮಗಾರಿ ಕುರಿತು ಉಂಟಾಗಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಂಗಲೆಯನ್ನು ಈಗ ಸಚಿವ ಬೈರತಿ ಸುರೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಅವರು ಮನೆ ಖಾಲಿ ಮಾಡುವಂತೆ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಬೈರತಿ ಸುರೇಶ್ ಅವರು ಹಾಲಿ ಸಚಿವರಾಗಿದ್ದು, ಅವರ ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶ. ಈ ವಿಚಾರದಲ್ಲಿ ಹಿರಿಯ-ಕಿರಿಯ ಎಂಬ ಪ್ರಶ್ನೆಯೇ ಇಲ್ಲ. ಈ ಹಿಂದೆ ನಾನು ಸಚಿವನಾಗಿದ್ದ ಕಾರಣ ಸರ್ಕಾರ ಈ ನಿವಾಸವನ್ನು ನೀಡಿತ್ತು. ಈಗ ಸಚಿವ ಸ್ಥಾನದಲ್ಲಿಲ್ಲದ ಕಾರಣ ಸರ್ಕಾರದ ಮನೆ ಬಿಟ್ಟುಕೊಡುವುದು ನನ್ನ ಕರ್ತವ್ಯ ಎಂದು ಮಹದೇವಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ನನಗೆ ಸ್ವಂತ ಮನೆ ಇಲ್ಲದ ಕಾರಣ ಸೂಕ್ತ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಮನೆ ಅಂತಿಮವಾದ ತಕ್ಷಣವೇ ಬಂಗಲೆಯನ್ನು ಖಾಲಿ ಮಾಡುತ್ತೇನೆ. ಈ ಹಿಂದೆ ಸದನದಲ್ಲಿಯೂ ಬೈರತಿ ಸುರೇಶ್ ಅವರು ಈ ಬಗ್ಗೆ ಹೇಳಿದ್ದರು. ಆಗಲೂ ಮನೆ ಹುಡುಕುತ್ತಿದ್ದೇನೆ ಎಂದು ತಿಳಿಸಿದ್ದೆ. ಈ ವಿಚಾರದಲ್ಲಿ ಯಾರ ಮೇಲೂ ನಾನು ತಪ್ಪು ಹೊರಿಸುವುದಿಲ್ಲ ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.

By Ravikumar - 07-09-2026


Ads in Post