Search


ಮೋದಿ ಕಾರ್ಯಕ್ರಮದಲ್ಲಿ ಭಾರೀ ಭದ್ರತಾ ಲೋಪ; ಬಂದೂಕುಧಾರಿಗಳು ಅರೆಸ್ಟ್

ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಕಾರ್ಯಕ್ರಮಕ್ಕೂ ಕೆಲವೇ ಗಂಟೆಗಳ ಮುನ್ನ ಭದ್ರತಾ ಆತಂಕ ಮೂಡಿಸಿದ ಘಟನೆ ನಡೆದಿದೆ. ಕಾರ್ಯಕ್ರಮದ ಸ್ಥಳದ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಲ್ಲಿ ಒಬ್ಬನ ಬಳಿ ಬಂದೂಕು ಪತ್ತೆಯಾಗಿದ್ದು, ಮತ್ತೊಬ್ಬ ತಾನು ಪ್ರಧಾನಮಂತ್ರಿ ಕಚೇರಿ (PMO) ಅಧಿಕಾರಿಯೆಂದು ಹೇಳಿಕೊಂಡಿದ್ದಾನೆ.

ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ (NMACC) ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸ್ಥಳದಲ್ಲಿ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ (GFF) 2026 ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಕಾರ್ಯಕ್ರಮದ ಸ್ಥಳದಲ್ಲಿ ಓರ್ವ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣವೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಳಿಕ ಆತನೊಂದಿಗೆ ಇದ್ದ ಮತ್ತೊಬ್ಬ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದವರಲ್ಲಿ 24 ವರ್ಷದ ರೋಹನ್ ಪಾರೇಖ್ ಎಂಬಾತ ತಾನು PMO ಅಧಿಕಾರಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ಆತನ ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಇದೇ ವೇಳೆ ಆತನೊಂದಿಗೆ ಇದ್ದ ಅಂಗರಕ್ಷಕನ ಬಳಿ ಬಂದೂಕು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೂ ಮುನ್ನವೇ ಈ ಘಟನೆ ನಡೆದಿರುವುದರಿಂದ ಭದ್ರತಾ ಪಡೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ. ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಕಾರ್ಯಕ್ರಮದ ಸ್ಥಳಕ್ಕೆ ಅವರು ಯಾವ ಉದ್ದೇಶದಿಂದ ಬಂದಿದ್ದರು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಅವರ ಮೊಬೈಲ್ ಫೋನ್‌ಗಳು, ಗುರುತಿನ ದಾಖಲೆಗಳು ಹಾಗೂ ಇತರ ವಸ್ತುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

By thebigbulletin.com - 08-09-2026


Ads in Post