ಬೆಂಗಳೂರು : ರಾಜ್ಯದಲ್ಲಿ ಎಚ್ಐವಿ (HIV) ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂಬ ವರದಿ ಹೊರಬಿದ್ದಿದ್ದು. ಪುರುಷರ ನಡುವಿನ ಸಲಿಂಗ ಕಾಮದಿಂದ ಏಡ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿ (KSAPS) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಎಚ್ಐವಿ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಜಿಗಿತ ಕಂಡಿದೆ ಎಂದು ವರದಿಯಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ HIV ಪ್ರಕರಣ
2023-2024ರ ಅವಧಿಯಲ್ಲಿ: 44,581 ಪ್ರಕರಣಗಳು
2024-2025ರ ಅವಧಿಯಲ್ಲಿ: 62,664 ಪ್ರಕರಣಗಳು
2025-2026ರ ಪ್ರಸ್ತುತ ಅವಧಿಯಲ್ಲಿ: 66,606 ಪ್ರಕರಣಗಳು
ಮೇಲಿನ ಅಂಕಿ-ಅಂಶಗಳನ್ನ ಗಮನಸಿದರೆ, ಕೇವಲ ಮೂರೇ ವರ್ಷಗಳಲ್ಲಿ ಸಕ್ರಿಯ ಏಡ್ಸ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. 18 ರಿಂದ 25 ಮತ್ತು 26 ರಿಂದ 35 ವರ್ಷದೊಳಗಿನ ಯುವಕರಲ್ಲಿ ಈ ಸೋಂಕು ಅತಿ ಹೆಚ್ಚು ಪತ್ತೆಯಾಗುತ್ತಿದೆ. 18-25 ವರ್ಷದ ವಯೋಮಾನದವರಲ್ಲಿ ಈ ಸಂಖ್ಯೆ 6,962 ಕ್ಕೆ ಏರಿಕೆಯಾಗಿದ್ದು, 26-35 ವರ್ಷದ ವಯೋಮಾನದವರಲ್ಲಿ ಸೋಂಕು 14,555ಕ್ಕೆ ಏರಿಕೆಯಾಗಿದೆ. ಈ ವರ್ಷವೇ 417 ಹೊಸ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ವರದಿಯಿಂದ ಬಹಿರಂಗಗೊಂಡಿದೆ.
ಸಲಿಂಗ ಕಾಮ: ಹೆಚ್ಚುತ್ತಿದೆ HIV
ಇನ್ನು ಏಡ್ಸ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆಗೆ ಸಲಿಂಗ ಕಾಮ ಪಾತ್ರ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದು, “ಸಲಿಂಗ ಕಾಮದ ವೇಳೆ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ನಾವು ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಮುಖ್ಯವಾಗಿ ಕಾಲೇಜು ಹಾಸ್ಟೆಲ್ಗಳಲ್ಲಿ ಉಂಟಾಗಿರುವ ಸೋಂಕಿನ ಹರಡುವಿಕೆಯಿಂದಾಗಿ ಪ್ರಕರಣಗಳು ಹೆಚ್ಚಾಗಿವೆ. ಕೆಲವು ಪುರುಷರು ಮಹಿಳಾ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಮತ್ತು ನಂತರ ತಮ್ಮದೇ ಗುಂಪಿನ ಇತರ ಪುರುಷರೊಂದಿಗೆ ಸಂಪರ್ಕ ಹೊಂದುವುದರಿಂದ ಸೋಂಕು ವೇಗವಾಗಿ ಹರಡುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೇಟಿಂಗ್ ಆಪ್ಗಳಿಂದ ಹೆಚ್ಚುತ್ತಿದೆ ಏಡ್ಸ್.!
ಹಿರಿಯ ಸಾಂಕ್ರಾಮಿಕ ರೋಗ ತಜ್ಞರ ಪ್ರಕಾರ ಡೇಟಿಂಗ್ ಆಪ್ಗಳ ಕಾರಣದಿಂದಾಗಿ ಸುಲಭವಾಗಿ ಸಂಗಾತಿಗಳು ಸಿಗುತ್ತಿರುವುದರಿಂದ ಸುರಕ್ಷತೆ ಇಲ್ಲದ ದೈಹಿಕ ಸಂಪರ್ಕ ಹೆಚ್ಚಾಗುತ್ತಿದೆ. ಇದರಿಂದ ಹೆಚ್ಐವಿ ಹರಡುವಿಕೆ ತೀವ್ರವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಈ ಕುರಿತು ಸರ್ಕಾರ ಎಚ್ಚೆತ್ತುಕೊಂಡು ಜಾಗೃತಿ ಕಾರ್ಯಕ್ರಮಗಳನ್ನ ರೂಪಿಸುತ್ತಿದ್ದು, ಕಾಲೇಜು ಹಾಸ್ಟೆಲ್ಗಳು ಮತ್ತು ಕಾರ್ಪೊರೇಟ್ ಕಚೇರಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಜೊತೆಗೆ ಮಾರ್ಗದರ್ಶನ ಪಡೆಯಲು ಸರ್ಕಾರದ ‘ಬ್ರೇಕ್ಫ್ರೀ’ ಮೊಬೈಲ್ ಆಪ್ ಅನ್ನು ಬಳಸಲು ಉತ್ತೇಜಿಸಲಾಗುತ್ತಿದೆ. ಇದರೊಂದಿಗೆ ಉಚಿತ ಮಾಹಿತಿ ಹಾಗೂ ಬೆಂಬಲಕ್ಕಾಗಿ 1097 ಸಹಾಯವಾಣಿ ಸದಾ ಕಾರ್ಯನಿರ್ವಹಿಸುತ್ತಿದ್ದು, ಕಾರ್ಪೊರೇಟ್ ವಲಯಗಳಲ್ಲಿ ಮುಂದಿನ ಎರಡು ತಿಂಗಳ ಕಾಲ ನಿರಂತರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.