ಬೆಂಗಳೂರು: ಅಯೋದ್ಯೆ ರಾಮ ಮಂದಿರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಮ ಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಣ ಮತ್ತು ಆಸ್ತಿಯನ್ನು ಲೂಟಿ ಮಾಡಲಾಗಿದ್ದು, ಈ ಲೂಟಿಯಲ್ಲಿ ಬಡವರು, ದಲಿತರು ಅಥವಾ ರೈತರು ಭಾಗಿಯಾಗಿಲ್ಲ, ಈ ಲೂಟಿಗೆ ಕಾರಣ RSS ಮತ್ತು ಬಿಜೆಪಿಗರು ಎಂದು ಖರ್ಗೆ ಗಂಭೀರ ಆರೋಪ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ಖರ್ಗೆ, ರಾಮ ಮಂದಿರದ ದೇಣಿಗೆ ದುರ್ಬಳಕೆ ಕುರಿತು ಪ್ರಶ್ನೆ ಎತ್ತಿದರು. "ರಾಮ ಮಂದಿರದ ಹೆಸರಿನಲ್ಲಿ ನಡೆದ ಲೂಟಿಯನ್ನು ಯಾರು ಮಾಡಿದ್ದಾರೆ? ಬಡವರು ಹೋಗಿ ಕಳ್ಳತನ ಮಾಡಿದರಾ? ದಲಿತರು ಮಾಡಿದರಾ? ರೈತರು ಮಾಡಿದರಾ? ಇಲ್ಲ. ಸಮಾಜದಲ್ಲಿ ಪ್ರಭಾವ ಹೊಂದಿರುವ ಆರ್ಎಸ್ಎಸ್, ಬಿಜೆಪಿ ಮತ್ತು ಅವರ ಬೆಂಬಲಿಗರೇ ಈ ಲೂಟಿ ಮಾಡಿದ್ದಾರೆ" ಎಂದು ಆರೋಪಿಸಿದರು.
ಬಿಜೆಪಿಯವರು ಧರ್ಮದ ಹೆಸರನ್ನು ಬಳಸಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ, "ಪ್ರತಿದಿನ ದೇವರ ಹೆಸರನ್ನು ಜಪಿಸುತ್ತಾರೆ. ಆದರೆ ಅದೇ ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಾರೆ. ಇದು ಜನರನ್ನು ಮೋಸಗೊಳಿಸುವ ಕೆಲಸ, ಗ್ರಾಮದಿಂದ ಗ್ರಾಮಕ್ಕೆ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುವವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. "ರಾಮನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರ ಬಳಿ ಹೋಗುವವರೇ ಈ ರೀತಿಯ ಲೂಟಿಯಲ್ಲಿ ತೊಡಗಿದ್ದಾರೆ. ಆದ್ದರಿಂದ ಜನರು ಜಾಗರೂಕರಾಗಿರಬೇಕು" ಎಂದು ತಿಳಿಸಿದರು.
ಇದೇ ವೇಳೆ ಉತ್ತರ ಪ್ರದೇಶದಿಂದ ಬಂದಿರುವ ಮಾಹಿತಿಯನ್ನು ಉಲ್ಲೇಖಿಸಿದ ಖರ್ಗೆ, "ರಾಮ ಮಂದಿರದ ಹೆಸರಿನಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಬೆಳ್ಳಿ ಇಟ್ಟಿಗೆಗಳನ್ನು ಲೂಟಿ ಮಾಡಲಾಗಿದೆ ಎಂಬ ಸುದ್ದಿಗಳು ಬರುತ್ತಿವೆ" ಎಂದು ಆರೋಪಿಸಿದರು.