ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸ್ಥಾಪಕಿ ಮಮತಾ ಬ್ಯಾನರ್ಜಿಗೆ (Mamata Banerjee) ಮತ್ತೊಂದು ಶಾಕ್ ಎದುರಾಗಿದ್ದು, ಟಿಎಂಸಿಯ ಬಂಡಾಯ ಶಾಸಕರು ಮಮತಾ ಬ್ಯಾನರ್ಜಿಯನ್ನ ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಮಮತಾ ಬ್ಯಾನರ್ಜಿಯ ಅಳಿಯ, ಅಭಿಷೇಕ್ ಬ್ಯಾನರ್ಜಿಯನ್ನ ಪಕ್ಷದಿಂದಲೇ ಹೊರ ಹಾಕಿದ್ದು. ಈ ಮೂಲಕ ಮಮತಾ ಬ್ಯಾನರ್ಜಿ ತಾವು ಕಟ್ಟಿದ ಪಕ್ಷದಲ್ಲೇ ಮೂಲೆ ಗುಂಪಾಗಿದ್ದಾರೆ.
ಈಗಾಗಲೇ ಟಿಎಂಸಿ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, 20 ಸಂಸದರು ಟಿಎಂಸಿಯನ್ನ ತೊರೆದು NCPI ಪಕ್ಷವನ್ನ ಸೇರಿಕೊಂಡಿದ್ದಾರೆ, ಅತ್ತ ಬಂಗಾಳ ವಿಧಾನ ಸಭೆಯಲ್ಲೂ ಅಸಮಧಾನ ಜೋರಾಗಿದ್ದು, ರುತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ 59ಕ್ಕೂ ಹೆಚ್ಚು ಶಾಸಕರು ಟಿಎಂಸಿ ಪಕ್ಷದ ಸಂಪೂರ್ಣ ಅಧಿಕಾರವನ್ನ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಇದರ ನಡುವೆ ಮತ್ತೊಂದು ಐತಿಹಾಸಿಕ ನಿರ್ಧಾರವನ್ನ ತೆಗೆದುಕೊಂಡಿದ್ದು, ಮಮತಾ ಬ್ಯಾನರ್ಜಿ ಅವರನ್ನ ಪಕ್ಷದ ಹುದ್ದೆಯಿಂದ ತೆಗೆದುಹಾಕಿ, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ಹೊಸ ಅಖಿಲ ಭಾರತ ಅಧ್ಯಕ್ಷರನ್ನಾಗಿ ಘೋಷಿಸಿದೆ.
ಪಕ್ಷದಿಂದಲೇ ವಜಾಗೊಂಡ ಅಭಿಷೇಕ್ ಬ್ಯಾನರ್ಜಿ...!
ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡಿದ್ದ ಬಂಡಾಯ ನಾಯಕರು, ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಣಯಕ್ಕೆ ಸರ್ವಾನುಮತದಿಂದ ಸಹಿ ಹಾಕಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಮರಳಿ ತರಲು 20 ಸದಸ್ಯರ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (NWC) ರಚಿಸಲಾಗಿದೆ. ಇದರಲ್ಲಿ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಸೇರಿದಂತೆ 12 ಪ್ರಮುಖ ನಾಯಕರನ್ನು ಸೇರಿಸಿಕೊಳ್ಳಲಾಗಿದೆ.
ಪಕ್ಷದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ ಮಮತಾ ಬ್ಯಾನರ್ಜಿ ಅವರನ್ನೇ ಕುರ್ಚಿಯಿಂದ ಇಳಿಸಿರುವ ಈ ನಡೆ ಇಡೀ ದೇಶದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದೆ. ಆದರೆ, ಈ ಭಾರಿ ಬಂಡಾಯದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಲಿ ಅಥವಾ ಅವರ ಅಧಿಕೃತ ಟಿಎಂಸಿ ನಾಯಕತ್ವವಾಗಲಿ ತಕ್ಷಣಕ್ಕೆ ಯಾವುದೇ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ಈ ಆಂತರಿಕ ಯುದ್ಧವು ಕೋರ್ಟ್ ಮೆಟ್ಟಿಲೇರುವ ಅಥವಾ ಮಮತಾ ಬ್ಯಾನರ್ಜಿ ಅವರ ಸರ್ಕಾರಕ್ಕೇ ಕಂಟಕ ತರುವ ಸಾಧ್ಯತೆಗಳಿದ್ದು, ಪಶ್ಚಿಮ ಬಂಗಾಳದ ರಾಜಕೀಯ ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.