Search


ಬೂಟಲ್ಲಿ ಹೊಡಿತೀನಿ ಎಂದ ಸಚಿವ ಮಲ್ಲಿಕಾರ್ಜುನ್; ಅಪ್ಪನಿಗೆ ಹುಟ್ಟಿದ್ರೆ ಹೊಡಿ ಎಂದ ಶಾಸಕ ಬಿಪಿ ಹರೀಶ್

ಹರಿಹರದಲ್ಲಿ ಭದ್ರಾ ನೀರಿನ ವಿಚಾರವಾಗಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ನಡುವೆ ನಡೆಯುತ್ತಿದ್ದ ವಾಕ್ಸಮರ ಇದೀಗ ತಾರಕಕ್ಕೇರಿದೆ. ರೈತರು ಭದ್ರಾ ನೀರಿನ ಸಮಸ್ಯೆ ಕುರಿತು ಸಚಿವರಿಗೆ ಮನವಿ ಸಲ್ಲಿಸುವ ವೇಳೆ ಶಾಸಕ ಹರೀಶ್‌ ಅವರ ಹೆಸರು ಪ್ರಸ್ತಾಪವಾಗಿದ್ದು, ಈ ವೇಳೆ ಸಚಿವರು ಆಕ್ರೋಶಗೊಂಡು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರೈತರೊಬ್ಬರು “ಹರೀಶಣ್ಣ ಅವರನ್ನು ಕೇಳಿದರೆ ನಿಮ್ಮ ಮೇಲೆ ಹೇಳುತ್ತಿದ್ದಾರೆ” ಎಂದು ಸಚಿವರ ಬಳಿ ಹೇಳಿದಾಗ ಮಲ್ಲಿಕಾರ್ಜುನ ಕೆರಳಿದ್ದಾರೆ. ಈ ವೇಳೆ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶಾಸಕರನ್ನು ಅಣ್ಣ ಎಂದು ಕರೆಯಬಾರದು ಎಂಬ ರೀತಿಯಲ್ಲೂ ಸಚಿವರು ಮಾತನಾಡಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.

ಸಚಿವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಿ.ಪಿ. ಹರೀಶ್‌, “ಮಲ್ಲಿಕಾರ್ಜುನ ಭ್ರಷ್ಟಾಚಾರದ ಹಣದ ಭ್ರಮೆಯಲ್ಲಿದ್ದಾರೆ. ಯಾರಿಗೆ ಬೇಕಾದರೂ ಏನು ಬೇಕಾದರೂ ಮಾತನಾಡಬಹುದು, ನಿಂದಿಸಬಹುದು ಎಂದುಕೊಂಡಿದ್ದಾರೆ. ನನಗೆ ಬೂಟಿನಲ್ಲಿ ಹೊಡೆಯುತ್ತೇನೆ ಎಂದಿದ್ದಾರೆ. ಅಪ್ಪನಿಗೆ ಹುಟ್ಟಿದ್ರೆ ಬೂಟಿನಲ್ಲಿ ಹೊಡೆಯಲಿ” ಎಂದು ತಿರುಗೇಟು ನೀಡಿದ್ದಾರೆ.

“ನಾವು ಜನರ ಮಧ್ಯೆ ಇದ್ದು, ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಸಚಿವರು ತಮ್ಮ ಮನೆತನ ಬೆಳೆಸಲು ಹೋರಾಡುತ್ತಿದ್ದಾರೆ. ನನಗೆ 22 ವರ್ಷವಿದ್ದಾಗಲೇ ದಾವಣಗೆರೆ ನಗರಸಭೆ ಸದಸ್ಯನಾಗಿದ್ದೆ. 40 ವರ್ಷಗಳ ರಾಜಕೀಯ ಅನುಭವವಿದೆ. ಇಂತಹ ದುಷ್ಟಶಕ್ತಿಗಳನ್ನು ಸಾಕಷ್ಟು ನೋಡಿದ್ದೇನೆ” ಎಂದು ಹರೀಶ್‌ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಸಚಿವರ ಕುಟುಂಬದ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿರುವ ಹರೀಶ್‌, “ಅವರ ತಂದೆ ಇದ್ದಾಗ ಶಂಕರಣ್ಣ ಎನ್ನಬೇಕು, ಇವರಿಗೆ ಮಲ್ಲಣ್ಣ ಎನ್ನಬೇಕು; ಬೇರೆಯವರಿಗೆ ಅಣ್ಣ ಎನ್ನಬಾರದು ಎಂಬ ಮನಸ್ಥಿತಿ ಅವರದ್ದು” ಎಂದು ಟೀಕಿಸಿದ್ದಾರೆ. ಭದ್ರಾ ನೀರಿನ ವಿಚಾರದಿಂದ ಆರಂಭವಾದ ವಿವಾದ ಇದೀಗ ಇಬ್ಬರು ನಾಯಕರ ನಡುವಿನ ವೈಯಕ್ತಿಕ ವಾಕ್ಸಮರದ ಮಟ್ಟಕ್ಕೆ ತಲುಪಿದೆ.

By Ravikumar - 10-09-2026


Ads in Post