Search


ವರ್ಷಕ್ಕೆ 2000 ಕೋಟಿ ವಹಿವಾಟು ನಡೆಸುತ್ತೇವೆ; EDಗೆ ಸಿಕ್ಕಿರೋ 2ಕೋಟಿ ನಮಗೆ ದೊಡ್ಡದಲ್ಲ ಎಂದ ಜಾರಕಿಹೊಳಿ

ಬೆಂಗಳೂರು: ತಮ್ಮ ಹಾಗೂ ಆಪ್ತರ ನಿವಾಸಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯ (ED) ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ನಮ್ಮ ಸಂಸ್ಥೆಗಳ ವಾರ್ಷಿಕ ವಹಿವಾಟು ₹2,000 ಕೋಟಿಗೂ ಅಧಿಕವಾಗಿದ್ದು, ದಾಳಿ ವೇಳೆ ಪತ್ತೆಯಾಗಿದೆ ಎನ್ನಲಾದ ₹2 ಕೋಟಿ ನಗದು ನಮಗೆ ದೊಡ್ಡ ಮೊತ್ತವೇನಲ್ಲ ಎಂದು ಅವರು ಹೇಳಿದ್ದಾರೆ.

ED ಅಧಿಕಾರಿಗಳು ವಶಪಡಿಸಿಕೊಂಡಿರುವ ₹2 ಕೋಟಿ ಹಣ ನಮ್ಮದೇ ಆಗಿದ್ದು, ಅದನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸುವ ಯೋಜನೆ ಹೊಂದಿದ್ದು, ಈವರೆಗೆ ಯಾವುದೇ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿದೇಶಿ ಹೂಡಿಕೆ ವಿಚಾರವನ್ನೇ ಮುಂದಿಟ್ಟುಕೊಂಡು ನಮ್ಮ ಮೇಲೆ ED ದಾಳಿ ನಡೆಸಲಾಗಿದೆ. ತಮ್ಮ ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಸ್ಥಾಪಿಸಿರುವುದು ನಿಜವಾಗಿದ್ದು, ಈ ಸಂಬಂಧ ಅಗತ್ಯ ದಾಖಲೆಗಳನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿದೆ. ED ಅಧಿಕಾರಿಗಳು ಕೇಳಿದರೂ ಎಲ್ಲ ದಾಖಲೆಗಳನ್ನು ಒದಗಿಸುವುದಾಗಿ ಅವರು ಹೇಳಿದ್ದಾರೆ.

ತಾವು ಯಾವುದೇ ವಿಚಾರವನ್ನು ಜಾತಿಯ ಆಧಾರದ ಮೇಲೆ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದ ಸತೀಶ್ ಜಾರಕಿಹೊಳಿ, ತಪ್ಪು ಮಾಡಿದ್ದರೆ ಜಾತಿಯನ್ನು ಮುಂದಿಟ್ಟುಕೊಂಡು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ED ತನಿಖೆಯನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿಯೇ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.

By Ravikumar - 11-09-2026


Ads in Post