ಸಕಲೇಶಪುರ: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಸಕಾಲದಲ್ಲಿ ಮಾಡಿಕೊಟ್ಟರೆ ಅವರಿಗೆ ಖುಷಿಯಿಂದ ‘ಟಿಪ್ಸ್’ ಅಥವಾ ‘ಗೌರವಧನ’ ನೀಡುವುದರಲ್ಲಿ ತಪ್ಪಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಕಲೇಶಪುರದಲ್ಲಿ ನಡೆದ ‘ಪ್ರಜಾಸೇವಾ ಆಂದೋಲನ’ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ವೇಳೆ ಸಚಿವರು ಈ ಹೇಳಿಕೆ ನೀಡುತ್ತಿದ್ದಂತೆ ಸಭೆಯಲ್ಲಿದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಭೂಮಿ ಸಂಬಂಧಿತ ಸಮಸ್ಯೆಯೊಂದನ್ನು ಹೊತ್ತು ಆಲೂರು ತಾಲ್ಲೂಕಿನಿಂದ ಆಗಮಿಸಿದ್ದ ಪುನೀತ್ ಎಂಬ ರೈತ, ಸಚಿವರ ಹೇಳಿಕೆಯನ್ನು ವೇದಿಕೆಯ ಮುಂದೆಯೇ ಖಂಡಿಸಿದರು. ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರವೇ ವೇತನ ನೀಡುತ್ತಿರುವಾಗ ಸಾರ್ವಜನಿಕರು ಮತ್ತೆ ಹಣ ಅಥವಾ ಟಿಪ್ಸ್ ನೀಡುವ ಅಗತ್ಯವೇನು ಎಂದು ಪ್ರಶ್ನಿಸಿದರು.
“ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿದೆ. ಹೀಗಿರುವಾಗ ಸಾರ್ವಜನಿಕರು ಯಾಕೆ ಟಿಪ್ಸ್ ನೀಡಬೇಕು? ಇದು ಲಂಚಕ್ಕೆ ಪ್ರಚೋದನೆ ನೀಡಿದಂತಾಗುವುದಿಲ್ಲವೇ?” ಎಂದು ರೈತರು ಹಾಗೂ ಯುವಕರು ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಸಭೆಯಲ್ಲಿದ್ದ ಹಲವರು ಬೆಂಬಲ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಸಚಿವ ಶಿವಲಿಂಗೇಗೌಡರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಅಧಿಕಾರಿಗಳು ಯಾರಿಂದಲೂ ಬಲವಂತವಾಗಿ ಹಣ ವಸೂಲಿ ಮಾಡಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಗೌರವ ಸೂಚಿಸುವ ಅರ್ಥದಲ್ಲಿ ತಾವು ಹೇಳಿಕೆ ನೀಡಿದ್ದಾಗಿ ಸಚಿವರು ತಿಳಿಸಿದರು. ಲಂಚ ನೀಡುವುದನ್ನು ಅಥವಾ ಪಡೆಯುವುದನ್ನು ತಾವು ಯಾವುದೇ ರೀತಿಯಲ್ಲೂ ಪ್ರೋತ್ಸಾಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಪ್ರತಿಭಟಿಸುತ್ತಿದ್ದ ಯುವಕರನ್ನು ಸಮಾಧಾನಪಡಿಸಿದರು. ಸಚಿವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ ಅವರು, ಯಾವುದೇ ಸರ್ಕಾರಿ ಅಧಿಕಾರಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಅಥವಾ ಹಣಕ್ಕೆ ಬೇಡಿಕೆ ಇಟ್ಟರೆ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸಭೆಯಲ್ಲಿನ ಪರಿಸ್ಥಿತಿ ತಿಳಿಗೊಂಡಿತು.