Search


ಲೇ... ಜನಾರ್ದನ ರೆಡ್ಡಿ, ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ ; ಶಿವರಾಜ್ ತಂಗಡಗಿ ಆಕ್ರೋಶ

ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಮತ್ತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ತಂಗಡಗಿ ತೀವ್ರ ವಾಗ್ದಾಳಿ ನಡೆಸಿದ್ದು, ಇಬ್ಬರು ನಾಯಕರ ನಡುವಿನ ಮಾತಿನ ಚಕಮಕಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜನಾರ್ದನ ರೆಡ್ಡಿ ತಮ್ಮನ್ನು ಏಕವಚನದಲ್ಲಿ ಸಂಬೋಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತಂಗಡಗಿ, “ಲೇ... ಜನಾರ್ದನ ರೆಡ್ಡಿ ಲೇ... ಚಂಚಲಗುಡ ಕೈದಿ ನಂ.697... ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ...” ಎಂದು ನಾನೂ ಮಾತನಾಡಬಲ್ಲೆ ಎಂದು ತಿರುಗೇಟು ನೀಡಿದ್ದಾರೆ. “ವಯಸ್ಸಿನಲ್ಲಿ ನೀವು ಹಿರಿಯರು. ನನ್ನ ಹಿರಿಯರು ನನಗೆ ಸಂಸ್ಕಾರ ಕಲಿಸಿರುವುದರಿಂದ ‘ಲೇ’ ಎನ್ನುವ ಮಟ್ಟಕ್ಕೆ ನಾನು ಇಳಿಯುವುದಿಲ್ಲ” ಎಂದು ಕಿಡಿಕಾರಿದ್ದಾರೆ.

ತಾವು ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಬೆಂಬಲಕ್ಕಾಗಿ ತಮ್ಮ ಬಳಿ ಬಂದಿದ್ದರು ಎಂದು ತಂಗಡಗಿ ಆರೋಪಿಸಿದ್ದಾರೆ. “ಆಗ ತಮ್ಮುಡು, ತಮ್ಮುಡು ಎಂದು ಬೆಂಬಲ ಕೇಳಿದವರು ಈಗ ಸುಳ್ಳಿನ ಸರಮಾಲೆ ಹೆಣೆಯುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ ಅವರು, ತಮ್ಮ ಬೆಂಬಲದಿಂದಲೇ ಅಂದು ರಾಜಕೀಯ ಸಮೀಕರಣಗಳು ಬದಲಾಗಿದ್ದವು ಎಂದು ಹೇಳಿದ್ದಾರೆ.

“ನೀನು ಯಾವ ಪುಟ್ಗೋಸಿ ಪಕ್ಷ ಸಂಘಟನೆ ಮಾಡಿದ್ದೀಯ ಅಂತ ನಿನ್ನ ಮನೆಗೆ ಎರಡು ಸಚಿವ ಸ್ಥಾನ ನೀಡಿದರು. ಅದೆಲ್ಲವೂ ನಾನು ಕೊಟ್ಟ ಬೆಂಬಲ ಹಾಗೂ ನನ್ನ ಕನಕಗಿರಿ ಕ್ಷೇತ್ರದ ಜನತೆ ನಿನಗೆ ನೀಡಿದ ಭಿಕ್ಷೆ” ಎಂದು ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಹಾಗೂ ಕನಕಗಿರಿ ಕ್ಷೇತ್ರದ ಜನರ ಬೆಂಬಲದಿಂದಲೇ ಜನಾರ್ದನ ರೆಡ್ಡಿ ಕುಟುಂಬಕ್ಕೆ ರಾಜಕೀಯ ಲಾಭವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ, “ನಮ್ಮ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಬ್ಲಾಕ್‌ಮೇಲ್ ಮಾಡಿದ ಎಡಬಿಡಂಗಿ ಗಿರಾಕಿ ನೀನು. ನನಗೆ ಕರೆ ಮಾಡಿ ದಮ್ಮಯ್ಯ ಎಂದು ಬೇಡಿಕೊಂಡವನು, ಈಗ ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಬಾಲ ಬಿಚ್ಚುತ್ತಿದ್ದೀಯಾ?” ಎಂದು ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜನಾರ್ದನ ರೆಡ್ಡಿಗೆ ನೇರ ಸವಾಲು ಹಾಕಿರುವ ತಂಗಡಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸುವಂತೆ ಆಹ್ವಾನಿಸಿದ್ದಾರೆ. “ನೀವು ರಾಜೀನಾಮೆ ನೀಡಿದ 24 ಗಂಟೆಯೊಳಗೆ ನಾನೂ ರಾಜೀನಾಮೆ ನೀಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಜನರ ಮುಂದೆ ನಿಮ್ಮ ಬಲಾಬಲ ಸಾಬೀತುಪಡಿಸಿ” ಎಂದು ಪಂಥಾಹ್ವಾನ ನೀಡಿದ್ದಾರೆ.

By Ravikumar - 07-09-2026


Ads in Post