Search


ಮಾಡೆಲ್‌ ತ್ವಿಷಾ ಸಾವು ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್‌ ಆದೇಶ..!

ನವದೆಹಲಿ : ಮಾಡೆಲ್‌ ತ್ವಿಶಾ ಶರ್ಮಾ ಸಾವು ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು.ಈ ಪ್ರಕರಣ ಸುಪ್ರೀಂಕೋರ್ಟ್ ಅಂಗಳ ತಲುಪಿದೆ, ಪ್ರಕರಣದ ಗಂಭೀರತೆಯನ್ನ ಪರಿಗಣಿಸಿರುವ ನ್ಯಾಯಾಲಯ, ತನಿಖೆಯನ್ನ ಸಿಬಿಐ ಹೆಗಲಿಗೆ ಹೊರಿಸಿದೆ. 

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಸಂತ್ರಸ್ತೆಯ ಪತಿ ಸಮರ್ಥ್ ಸಿಂಗ್ ವಕೀಲರಾಗಿದ್ದು, ಆಕೆಯ ಅತ್ತೆ ಗಿರಿಬಾಲಾ ಸಿಂಗ್ ಮಾಜಿ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಆರೋಪಿಗಳು ಕಾನೂನು ಹಿನ್ನೆಲೆಯುಳ್ಳ ಪ್ರಭಾವಿಗಳಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ತನಿಖೆಯ ಪಕ್ಷಪಾತ ನಡೆಯುವ ಸಾಧ್ಯತೆ ಇದೆ ಎಂಬ ನಿರೂಪಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಕ್ರಮ ಕೈಗೊಂಡಿದೆ.

ಅಷ್ಟೇ ಅಲ್ಲದ ಸಂತ್ರಸ್ಥ ಕುಟುಂಬ ಮತ್ತು ಆರೋಪಿಗಳ ವೈಯಕ್ತಿಕ ಹೇಳಿಕೆಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನ್ಯಾಯಾಲಯ ಮನವಿ ಮಾಡಿದೆ. ಈ ವೇಳೆ ಮಾತನಾಡಿದ ಎಸ್‌ಜಿ (ಸಾಲಿಸಿಟರ್‌ ಜನರಲ್‌) ತುಷಾರ್ ಮೆಹ್ತಾ ಸಂಭಾವ್ಯ ಆರೋಪಿಯಾದ ತ್ವಿಷಾ ಅವರ ಅತ್ತೆ ಗಿರಿಬಾಲಾ ಸಿಂಗ್, ಒಂದು ಚಾನೆಲ್‌ನಿಂದ ಮತ್ತೊಂದು ಚಾನೆಲ್‌ಗೆ ಜಿಗಿಯುತ್ತಾ ಸಂತ್ರಸ್ತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.

ಏನಿದು ಪ್ರಕರಣ...?

ನೋಯ್ಡಾ ನಿವಾಸಿಯಾಗಿದ್ದ 33 ವರ್ಷದ ತ್ವಿಶಾ ಶರ್ಮಾ ಮತ್ತು ಭೋಪಾಲ್‌ನ ವಕೀಲ ಸಮರ್ಥ್ ಸಿಂಗ್ ಸುಮಾರು ಐದು ತಿಂಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿ ವಿವಾಹವಾಗಿದ್ದರು. ಆದರೆ, ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ನಿವಾಸದಲ್ಲಿ ತ್ವಿಷಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ತ್ವಿಷಾ ಕುಟುಂಬಸ್ಥರು ಅತ್ತೆ-ಮಾವನ ವಿರುದ್ಧ ನಿರಂತರ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಹೊರಿಸಿದ್ದಾರೆ.

ಸ್ಥಳೀಯ ಪೊಲೀಸರು ಮೂರು ದಿನಗಳ ಕಾಲ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಸಂತ್ರಸ್ತರ ಪರ ವಕೀಲ ಸಿದ್ಧಾರ್ಥ್ ಲೂತ್ರಾ ವಾದಿಸಿದರು. ಸಾವಿನ ನಿಜವಾದ ಕಾರಣ ತಿಳಿಯಲು ಎರಡನೇ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಒತ್ತಾಯಿಸಿದ್ದರು. ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಭೋಪಾಲ್‌ನ ಏಮ್ಸ್  ವೈದ್ಯರ ತಂಡವು ಭಾನುವಾರ (ಮೇ,೨೪) ಮೃತದೇಹದ ಎರಡನೇ ಶವಪರೀಕ್ಷೆ ನಡೆಸಿದೆ.

By thebigbulletin.com - 26-05-2026


Ads in Post