ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ವಿಶ್ವವಿದ್ಯಾನಿಲಯದ ಓವಲ್ ಮೈದಾನಕ್ಕೆ ತಲುಪಿದ್ದಾರೆ. ಓವಲ್ ಮೈದಾನದಿಂದ ಅಧಿಕೃತ ಕಾರ್ಯಕ್ರಮ ನಡೆಯಲಿರುವ ನಾರಾಯಣ ಶಾಸ್ತ್ರಿ ರಸ್ತೆಯ ವಿವೇಕ ಸ್ಮಾರಕಕ್ಕೆ (ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ) ಕಾರಿನ ಮೂಲಕ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದಾರೆ. ಈ ಎರಡು ಸ್ಥಳಗಳ ನಡುವಿನ ಅಂತರ ಕೇವಲ ೨ ಕಿಲೋಮೀಟರ್ (2 km) ಆಗಿದೆ.
ಮೋದಿ ಅವರ ಕಾರಿನ ದಂಡು ಓವಲ್ ಮೈದಾನದಿಂದ ಹೊರಡುತ್ತಿದ್ದಂತೆ, ಇಡೀ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ಮತ್ತು ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದಾರೆ. ಸಾಂಸ್ಕೃತಿಕ ನಗರಿಯ ಜನತೆ ಪ್ರಧಾನಿಯವರ ಮೇಲೆ ಹೂಮಳೆಗರೆದು, "ಮೋದಿ, ಮೋದಿ" ಎಂಬ ಘೋಷಣೆಗಳೊಂದಿಗೆ ಇಡೀ ಪರಿಸರವನ್ನು ಮೊಳಗಿಸುತ್ತಿದ್ದಾರೆ. ಸಾಂಪ್ರದಾಯಿಕ ಕಲಾತಂಡಗಳ ಪ್ರದರ್ಶನವು ಮೈಸೂರು ದಸರಾ ಮಹೋತ್ಸವದ ವೈಭವವನ್ನು ಮರುಸೃಷ್ಟಿಸಿದಂತೆ ಕಂಗೊಳಿಸುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಆಶ್ರಮ ನಿರ್ಮಿಸಿರುವ ವಿವೇಕ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ, ನಂತರ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲಾದ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
ಸೌಹಾರ್ದತೆ ಮತ್ತು ಪ್ರಗತಿಯ ಸಂಕೇತ: ಮೈಸೂರಿನ ಇತಿಹಾಸದಲ್ಲಿ ಸದಾ ಸ್ಮರಣೀಯ!
ಎಸ್. ಎಂ. ಸ್ವಾತಿ , ನ್ಯೂಸ್ ಡೆಸ್ಕ್