ನವದೆಹಲಿ : ವಿದೇಶಿ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿರವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಮೇ 21,) ಸಂಜೆ 4:30ಕ್ಕೆ ಮಂತ್ರಿ ಪರಿಷತ್ತಿನ ಸಭೆ ಕರೆದಿದ್ದಾರೆ. ಇದೇ ಮೊದಲ ಭಾರಿಗೆ ಈ ಸಭೆಯಲ್ಲಿ ಎಲ್ಲಾ ಕ್ಯಾಬಿನೆಟ್ ಸಚಿವರುಗಳು, ರಾಜ್ಯ ಸಚಿವರುಗಳು ಮತ್ತು ಉಸ್ತುವಾರಿ ಹೊಂದಿರುವ ಸಚಿವರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ವಿದೇಶಿ ಪ್ರವಾಸ ಮುಗಿಸಿಕೊಂಡು ಮರಳುತ್ತಿದ್ದಂತೆ ಪ್ರಧಾನಿ ಮೋದಿ ಕರೆದಿರುವ ಈ ಸಭೆ ಮೇಲೆ ದೇಶದ ಜನರ ಚಿತ್ತ ನೆಟ್ಟಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದಲ್ಲಿ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್- ಡೀಸೆಲ್, ಎಲ್ಪಿಜಿ ಸೇರಿದಂತೆ ಹಲವು ಗೃಹ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು. ದೇಶದ ಜನರ ಮೇಲೆ ಹೊರೆಯಾಗುತ್ತಿದೆ. ಇದರ ನಡುವೆ ಈ ಸಂಕಷ್ಟದ ಸಮಯವನ್ನ ಯಾವ ರೀತಿ ನಿಭಾಯಿಸಬೇಕು ಎಂದು ಚರ್ಚೆ ನಡೆಸಲು ಈ ಸಭೆ ಕರೆಯಲಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಸಭೆಯಲ್ಲಿ ತೆಗೆದುಕೊಳ್ಳಬಹುದಾದ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಕ್ರಮಗಳ ವಿವರಗಳು ಇಲ್ಲಿವೆ:
ಸುಮಾರು 4 ರಿಂದ 5 ಗಂಟೆಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ.
1.ಮಧ್ಯಾವಧಿ ಪರಿಶೀಲನೆ (Mid-Term Review): ವಿವಿಧ ಸಚಿವಾಲಯಗಳ ಕಾರ್ಯವೈಖರಿ, ಪ್ರಮುಖ ನಿರ್ಧಾರಗಳು ಮತ್ತು ಸರ್ಕಾರಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ.
2.ಸಂಪುಟ ಪುನಾರಚನೆ ವದಂತಿ (Cabinet Reshuffle): ಆಡಳಿತದ ಆದ್ಯತೆಗಳ ಪರಾಮರ್ಶೆ ನಡೆಯುತ್ತಿರುವುದರಿಂದ, ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆಗಳಾಗಲಿವೆ ಎಂಬ ಚರ್ಚೆಗಳು ತೀವ್ರಗೊಂಡಿವೆ.
3.ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಹಣದುಬ್ಬರ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಭಾರತದ ಭದ್ರತೆ ಮತ್ತು ಆರ್ಥಿಕತೆಯ ಮೇಲಾಗುವ ಪರಿಣಾಮಗಳ ಕುರಿತು ಕಾರ್ಯತಂತ್ರದ ಚರ್ಚೆ.
4.ವಲಯವಾರು ಮೌಲ್ಯಮಾಪನ: ಇಂಧನ, ಕೃಷಿ, ರಸಗೊಬ್ಬರ, ನಾಗರಿಕ ವಿಮಾನಯಾನ ಮತ್ತು ಹಡಗು ಸಾರಿಗೆ ವಲಯಗಳ ನೀತಿಗಳ ಪರಾಮರ್ಶೆ.
"ದೇಶದ ಆರ್ಥಿಕತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಹೊರಬರಲಿರುವ ಆ ಅದ್ಭುತ ನಿರ್ಧಾರಗಳೇನು? ಸಂಪುಟ ಪುನಾರಚನೆಯ ವದಂತಿ ನಿಜವಾಗಿ ಯಾರಿಗೆ ಹೊಸ ಜವಾಬ್ದಾರಿ ಸಿಗಲಿದೆ? ಕುತೂಹಲದ ಈ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ!"