ನವದೆಹಲಿ : 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ ನಿಮಿತ್ತ ಜಪಾನ್ ಪ್ರಧಾನಿ ಸನೈ ತಕಾಚಿ ಅವರು ಭಾರತ ಪ್ರವಾಸದಲ್ಲಿದ್ದು, ಎರಡು ದೇಶಗಳು ಅನೇಕ ಒಪ್ಪಂದಕ್ಕೆ ಸಹಿ ಹಾಕಿವೆ, ಈ ಶೃಂಗಸಭೆಯ ನಂತರ ಇಬ್ಬರು ಪ್ರಧಾನಿಗಳು ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ್ದು, ಈ ವೇಳೆ ಪ್ರಧಾನಿ ಮೋದಿ (PM Narendra Modi) ಜಪಾನ್ ಪ್ರಧಾನಿ ತಕೈಚಿಯನ್ನ ಕಿರಿಯ ತಂಗಿ ಎಂದು ಸಂಭೋದಿಸಿದ್ದಾರೆ.
ಭಾರತ ಮತ್ತು ಜಪಾನ್ ದೇಶಗಳು ತಮ್ಮ ಮೊದಲ ರಕ್ಷಣಾ ಸಹ-ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿವೆ. 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನಮಂತ್ರಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ತಕೈಚಿ ಅವರನ್ನು ಸ್ವಾಗತಿಸಿದರು. ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
“ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಜಪಾನ್ ಪ್ರಧಾನಿ, ನನ್ನ ಕಿರಿಯ ತಂಗಿಯಾದ ತಕೈಚಿ ಅವರನ್ನು ನಾನು ಭಾರತಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತೇನೆ. ಅವರು ಜಪಾನ್ನ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದಾರೆ ಹಾಗೂ ದೂರಾಲೋಚನೆ ಉಳ್ಳ ಜನಪ್ರಿಯ ನಾಯಕಿಯಾಗಿದ್ದಾರೆ” ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು. ಭಾರತದ ಬೆಳವಣಿಗೆಯ ಪಯಣದಲ್ಲಿ ಜಪಾನ್ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಪ್ರಸ್ತುತ ವಿಶ್ವದ 5 ಅತಿದೊಡ್ಡ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿರುವ ಉಭಯ ದೇಶಗಳು ಶಾಂತಿ, ಸ್ಥಿರತೆ ಮತ್ತು ನಿಯಮ ಆಧಾರಿತ ಪ್ರಾದೇಶಿಕ ವ್ಯವಸ್ಥೆಯನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಲಿವೆ ಎಂದರು.