Search


ಮೋದಿ ಸರ್ಕಾರಕ್ಕೆ 12 ವರ್ಷ: ಸಾಧಿಸಿದ್ದೇನು? ಎದುರಿಸಿದ ಸವಾಲುಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷ ತುಂಬಿದ್ದು, ಈ ಅವಧಿಯು ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರವು "ಹಲವಾರು ಐತಿಹಾಸಿಕ ನಿರ್ಣಯಗಳನ್ನ ಕೈಗೊಂಡಿದ್ದು, ಕೆಲವು ನಿರ್ಣಯಗಳು ದೇಶದಲ್ಲಿ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿವೆ, ಇದರ ಜೊತೆಗೆ ಮೋದಿ ಸರ್ಕಾರದ ಕೆಲವು ನೀತಿಗಳು ಜನರ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅನೇಕ ಟೀಕೆಗಳನ್ನು ಕೂಡ ಎದುರಿಸಿದೆ, ಹಾಗಾದರೆ ನರೇಂದ್ರ ಮೋದಿ ಸರ್ಕಾರದ ಕಳೆದ 12 ವರ್ಷದ ಆಡಳಿತವೇಗಿತ್ತು ಎಂಬುದನ್ನ ನೋಡೋಣ ಬನ್ನಿ.

ಜನ್‌ಧನ್‌ ಯೋಜನೆ & ಡಿಜಿಟಲ್‌ ಇಂಡಿಯಾ..!

ಕೇಂದ್ರ ಸರ್ಕಾರ ಫಲಾನುಭವಿಗಳಿಗೆ 1₹ ಕೊಟ್ಟರೆ ಜನರಿಗೆ ಕೇವಲ 15 ಪೈಸೆ ಸಿಗುತ್ತೇ ಎಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಹೇಳಿದ್ದರು, ವ್ಯವಸ್ಥೆಯಲ್ಲಿ ಭ್ರಷ್ಟಚಾರವೆಂಬುದು ಹಾಸು ಹೊಕ್ಕಾಗಿದ್ದ ಸಮಯದಲ್ಲಿ ಮೋದಿ ಸರ್ಕಾರ ಜನರಿಗೆ ಬ್ಯಾಂಕ್‌ ಖಾತೆ ತೆರೆಯಲು ಪ್ರೋತ್ಸಾಹಿತು, ಹಣವನ್ನ ಕೈಗೆ ಕೊಡದೆ, ನೇರ ವರ್ಗಾವಣೆ ಮೂಲಕ ಜನರ ಖಾತೆ ಹಣ ಹಾಕಿ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಕೆಲಸ ಮೋದಿ ಮಾಡಿದರು, ಇದರ ಜೊತೆಗೆ ಕೇಂದ್ರ ಸರ್ಕಾರ ಪರಿಚಯಿಸಿದ ಯುಪಿಐ (UPA) ಯೋಜನೆಯು ಇಡೀ ಪ್ರಪಂಚವೇ ಭಾರತದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದ್ದು, ಈ ಮೂಲಕ ಆರ್ಥಿಕ ಸುಧಾರಣೆಯಲ್ಲಿ ರಚನಾತ್ಮಕ ಬದಲಾವಣೆಗೆ ಮೋದಿ ಸರ್ಕಾರ ಮುಂದಾಗಿದೆ.

ಉಜ್ವಲ್‌ ಯೋಜನಾ & ಸ್ವಚ್ಚ ಭಾರತ..!

ಗ್ಯಾಸ್‌ ಸಿಲಿಂಡರ್‌ ಎಂಬುದು ಐಶರಾಮಿ ವಸ್ತು ಎಂಬ ಕಲ್ಪನೆಯಿದ್ದ ಸಮಯದಲ್ಲಿ ಮೋದಿ ಸರ್ಕಾರ ಮನೆ ಮನೆಗೂ ಉಜ್ವಲ ಯೋಜನೆ ಮೂಲಕ ಎಲ್‌ಪಿಜಿ ಸಿಲಿಂಡರ್‌ ನೀಡುವ ಕೆಲಸ ಮಾಡಿತು. ಇದರ ಪರಿಣಾಮವಾಗಿ ಸುಮಾರು 10 ಕೋಟಿಗೂ ಹೆಚ್ಚು ಮನೆಗಳು ಸಬ್ಸಿಡಿ ಮೂಲಕ ಗ್ಯಾಸ್‌ ಸಿಲಿಂಡರ್‌ ಪಡೆಯುವಂತಾಯಿತು. ಅಷ್ಟೇ ಅಲ್ಲದೇ ಕನಿಷ್ಟ ಶೌಚಾಲಯವಿಲ್ಲದ ಪರದಾಡುತ್ತಿದ್ದ ದೇಶದ ಜನರಿಗೆ ಮೋದಿ ಸರ್ಕಾರ ಸುಮಾರು 15 ಕೋಟಿಗೂ ಹೆಚ್ಚು ಶೌಚಾಲಯಗಳನ್ನ ಕಟ್ಟಿಸಿಕೊಟ್ಟು, ಸ್ವಚ್ಚ ಭಾರತದ ಗಾಂಧೀಜಿ ಕನಸನ್ನ ನನಸಾಗಿಸಲು ಪ್ರಯತ್ನಿಸಿದರು. ಜೊತೆಗೆ ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆ ಮೂಲಕ 4 ಕೋಟಿಗೆ ಹೆಚ್ಚು ಸುಸಜ್ಜಿತ ಮನೆಗಳನ್ನ ಬಡವರಿಗೆ ನಿರ್ಮಿಸಿ ಕೊಡಲಾಗಿದೆ.

ಜಿಎಸ್‌ಟಿ & ಇತರೆ ಆರ್ಥಿಕ ಸುಧಾರಣೆ..!

ʻಒಂದು ದೇಶ, ಒಂದು ತೆರಿಗೆʼ ಪರಿಕಲ್ಪನೆಯಡಿಯಲ್ಲಿ ಜಾರಿಗೆ ಬಂದ ಜಿಎಸ್‌ಟಿ(GST) ಯೋಜನೆಯು ಮೋದಿ ಸರ್ಕಾರದ ಮತ್ತೊಂದು ಸಾಧನೆಯಾಗಿದ್ದು, ಈ ಮೂಲಕ ರಾಜ್ಯಗಳಲ್ಲಿ ವಿಧಿಸುತ್ತಿದ್ದ ಅನೇಕ ವಿದಧ ತೆರಿಗೆಗಳಿಗೆ ಈ ಮೂಲಕ ಕಡಿವಾಣ ಹಾಕಲಾಯಿತು, ಜೊತೆಗೆ ಬ್ಯಾಂಕುಗಳ ದಿವಾಳಿತನವನ್ನ ತಪ್ಪಿಸಲು ಮತ್ತು ಬ್ಯಾಂಕಿಂಗ್‌ ವಲಯದಲ್ಲಿ ಪಾರದರ್ಶಕತೆಯನ್ನ ತರಲು ಹಲವು ನಿಯಂತ್ರಣ ಕ್ರಮಗಳನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ, ಇದರ ಜೊತೆಗೆ 2016ರಲ್ಲಿ ನಡೆದ ನೋಟು ಅಮಾನ್ಯೀಕರಣ (Demonetisation) ಇಂದಿಗೂ ಅನೇಕ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದ್ದು, ಕೇಂದ್ರ ಸರ್ಕಾರ ನಕಲಿ ನೋಟುಗಳ ವಿರುದ್ದದ ಕ್ರಮ ಎಂದು ಸಮರ್ಥಿಸಿಕೊಂಡಿದೆ. ಆದರೂ ಈ ವಿಷಯ ಚರ್ಚಿತ ವಿಷಯವಾಗಿಯೇ ಉಳಿದುಕೊಂಡಿದೆ.

ಆರೋಗ್ಯ ಮತ್ತು ಸಾಮಾಜಿಕ ಭದ್ರತೆ...!

2018ರಲ್ಲಿ ಆರಂಭವಾದ ಆಯುಷ್ಮಾನ್ ಭಾರತ ಯೋಜನೆ ದೇಶದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಮೂಲಕ ಆರೋಗ್ಯ ಸೇವೆಗಳ ಪ್ರವೇಶವನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಜೊತೆಗೆ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಗಳಲ್ಲಿ ಒಂದನ್ನು ಯಶಸ್ವಿಯಾಗಿ ನಡೆಸಿತು. ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಗಳ ಬಳಕೆ ಮತ್ತು ವ್ಯಾಪಕ ಲಸಿಕಾ ಅಭಿಯಾನ ಸರ್ಕಾರದ ಪ್ರಮುಖ ಸಾಧನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 

ಮೂಲಸೌಕರ್ಯ & ಅಭಿವೃದ್ಧಿಗೆ ವೇಗ..!

ಕಳೆದ 12 ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶಾದ್ಯಂತ 40 ಸಾವಿರ ಕಿಲೋಮೀಟರ್‌ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ಹೊಸ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಪರಿಚಯ ಮತ್ತು ರೈಲ್ವೆ ನಿಲ್ದಾಣಗಳ ಆಧುನೀಕರಣದ ಮೂಲಕ ರೈಲ್ವೆ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರಲು ಪ್ರಯತ್ನಿಸಲಾಗಿದೆ. ಜೊತೆಗೆ ದೇಶದೆಲ್ಲಡೆ ಐಐಟಿ, ಐಐಎಂ ಮತ್ತು ಏಮ್ಸ್‌ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. 

ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ

ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಕೇಂದ್ರ ಸರ್ಕಾರ ಕಠಿಣ ನಿಲುವು ತಾಳಿದ್ದು, 2016 ಉರಿ ದಾಳಿ, 2019ರ ಪುಲ್ವಾಮ ದಾಳಿ ಮತ್ತು ಇತ್ತೀಚಿನ ಪೆಹಲ್ಗಾಂ ದಾಳಿಗೆ ಕಾರಣವಾದ ಉಗ್ರರ ವಿರುದ್ದ ಕಠಿಣ ಕ್ರಮ ತೆಗೆದುಕೊಂಡಿದೆ. ಜೊತೆಗೆ ಪಾಕಿಸ್ತಾನವನ್ನ ಅಂತರ್‌ ರಾಷ್ಟ್ರೀಯ ವೇದಿಕೆಗಳಲ್ಲಿ ಭಯೋತ್ಪದಕ ದೇಶವೆಂಬುದನ್ನ ಸಾಭೀತು ಪಡಿಸಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತವು ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳೊಂದಿಗೆ ಸಹಕಾರ ವಿಸ್ತರಿಸಿದೆ. ಜಿ20 ಅಧ್ಯಕ್ಷತೆ, ಕ್ವಾಡ್ ಒಕ್ಕೂಟ, ಮತ್ತು ಜಾಗತಿಕ ದಕ್ಷಿಣ ರಾಷ್ಟ್ರಗಳ ಪರವಾಗಿ ಭಾರತ ವಹಿಸಿದ ಪಾತ್ರವು ದೇಶದ ರಾಜತಾಂತ್ರಿಕ ಪ್ರಭಾವವನ್ನು ಹೆಚ್ಚಿಸಿದೆ.

ಉತ್ಪಾದನಾ ವಲಯ ಮತ್ತು ಆತ್ಮನಿರ್ಭರ ಭಾರತ..!

"ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ" ಅಭಿಯಾನಗಳ ಮೂಲಕ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲು ಸರ್ಕಾರ ಪ್ರಯತ್ನಿಸಿದೆ. ಪಿಎಲ್‌ಐ (Production Linked Incentive) ಯೋಜನೆಗಳ ಮೂಲಕ ಎಲೆಕ್ಟ್ರಾನಿಕ್ಸ್, ಮೊಬೈಲ್ ಉತ್ಪಾದನೆ, ಔಷಧಿ ಮತ್ತು ಇತರ ಕೈಗಾರಿಕೆಗಳಲ್ಲಿ ಹೂಡಿಕೆ ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತವು ಗಮನಾರ್ಹ ಬೆಳವಣಿಗೆ ಕಂಡಿದ್ದರೂ, ಉತ್ಪಾದನಾ ವಲಯದ ಒಟ್ಟಾರೆ ಪಾಲು ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಿಲ್ಲ ಎಂಬ ಟೀಕೆಗಳು ಕೂಡ ಕೇಳಿಬರುತ್ತಿವೆ.

ಇಷ್ಟೇ ಅಲ್ಲದೆ ತ್ರಿವಳಿ ತಲಾಕ್‌ ರದ್ದು, ಕಾಶ್ಮೀರದ ಆರ್ಟಿಕಲ್‌ 370 ರದ್ದು, ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ, ಗಂಗಾ ನದಿ ಸ್ವಚ್ಚತೆ, ಕಾಶಿ ಕಾರಿಡಾರ್‌, ರೀತಿ ಅನೇಕ ಮಹತ್ತರ ನಿರ್ಧಾರಗಳನ್ನ ಕೇಂದ್ರ ಸರ್ಕಾರ ಈ 12 ವರ್ಷಗಳಲ್ಲಿ ತೆಗೆದು ಕೊಂಡಿದೆ.

ಮೋದಿ ಸರ್ಕಾರದ ವೈಫಲ್ಯಗಳು...!

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಟೀಕೆಗಳನ್ನ ಮತ್ತು ವೈಫಲ್ಯಗಳನ್ನು ಕೂಡ ಈ 12 ವರ್ಷದಲ್ಲಿ ಎದುರಿಸಿದೆ, ಮೊದಲನೆಯದಾಗಿ ಯುವಕರಲ್ಲಿ ನಿರುದ್ಯೋಗ  ಎಂಬುದು ಪ್ರಮುಖ ಸಮಸ್ಯೆಯಾಗಿದ್ದು, 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದ ಮಾತು ಸುಳ್ಳಾಗಿದೆ. ಇದರ ಜೊತೆಗೆ ಆಹಾರ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಳವಾಗಿದ್ದು, ಮಧ್ಯಮ ವರ್ಗದ ಜನ ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲೆ ಇದು ಒತ್ತಡ ತಂದಿದೆ. ಜೊತೆಗೆ  ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆಯ ಮೇಲೆ ಉಂಟಾದ ಒತ್ತಡ ಮತ್ತು ಆಮ್ಲಜನಕ ಕೊರತೆ ಕುರಿತ ಟೀಕೆಗಳೂ ಎದುರಾದವು.

ಕೃಷಿ ಕಾನೂನುಗಳು ವಾಪಾಸ್‌..!

ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷಿಯಾಗುತ್ತಿದ ಕೃಷಿ ಕಾಯ್ದೆಗಳನ್ನ ಮೋದಿ ದೇಶದ ಕ್ಷಮೆ ಕೇಳಿ ವಾಪಸ್‌ ಪಡೆದರು, ವರ್ಷಗಳ ಕಾಲ ಪಂಜಾಬ್‌ ಮತ್ತು ಹರಿಯಾಣ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು ಕೂಡ, ಮೋದಿ ಅವರ ಕಷ್ಟ ಕೇಳಲಿಲ್ಲ ಎಂಬ ಟೀಕೆಗಳು ಕೇಳಿ ಬಂದವು. ಇದರ ಜೊತೆಗೆ ಸಂಪತ್ತಿನ ಅಸಮಾನ ಹಂಚಿಕೆಯ ಕುರಿತು ಕೂಡ ವಿಪಕ್ಷಗಳು ಕೇಂದ್ರ ಸರ್ಕಾರವನ್ನ ಟೀಕಿಸಿದ್ದು, ಅಂಬಾನಿ, ಅದಾನಿ ಕೇಂದ್ರಿತ ಆರ್ಥಿಕ ನೀತಿ ಎಂದು ಆರೋಪ ಮಾಡಿವೆ. ಇತ್ತೀಚೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ರೀತಿಯ ಗಂಭೀರ ಆರೋಪಗಳು ಸರ್ಕಾರದ ಮೇಲೆ ಬಂದೆರಗಿವೆ.

ಇದರ ಜೊತೆಗೆ ಮಾಧ್ಯಮ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ತನಿಖಾ ಸಂಸ್ಥೆಗಳ ಕಾರ್ಯವೈಖರಿ ಮತ್ತು ಸಾಮಾಜಿಕ ಧ್ರುವೀಕರಣದ ಕುರಿತಾಗಿ ವಿರೋಧ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ಪ್ರಶ್ನೆಗಳನ್ನು ಎತ್ತುತ್ತಿವೆ. ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿ, ಕಾನೂನಿನ ಪ್ರಕಾರವೇ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳುತ್ತದೆ. ವೋಟ್‌ ಚೋರಿ ಮೂಲಕ ಮೋದಿ ಚುನಾವನೆ ಗೆಲ್ಲುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡಿದರು ಕೂಡ ನ್ಯಾಯಲಯದಲ್ಲಿ ಇದರ ಇತ್ಯರ್ಥ ಮಾಡಲು ವಿಪಕ್ಷಗಳು ಮುಂದಾಗುತ್ತಿಲ್ಲ.

ಈ ರೀತಿ ಅನೇಕ ಸವಾಲುಗಳ ನಡುವೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷಗಳ ಆಡಳಿತವನ್ನ ಪೂರ್ಣಗೊಳಿಸಿದ್ದು, 13ನೇ ವರ್ಷಕ್ಕೆ ಕಾಲಿಟ್ಟಿದೆ,  ಈಗಲೂ ಕೂಡ ಅನೇಕ ರಾಜ್ಯಗಳ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಭಾರೀ ಬಹುಮತದ ಗೆಲುವು ಸಿಗುತ್ತಿದ್ದು, ಕೆಲವೊಂದು ಚುನಾವಣ ಪೂರ್ವ ಸಮೀಕ್ಷಕಾರರು 2034ರವರೆಗೆ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇರಲಿದೆ ಎಂದು ಭವಿಷ್ಯ ನುಡಿಯುತ್ತಿವೆ, ಇದರ ನಡುವೆ ವಿಪಕ್ಷಗಳು ಕೂಡ ಮೋದಿ ಸರ್ಕಾರವನ್ನ ಕೆಡವಲು ತಯಾರಿ ಮಾಡಿಕೊಳ್ಳುತ್ತಿದ್ದು, 2029ರವರೆಗೆ ಏನೆಲ್ಲಾ ನಡೆಯಲಿದೆ ಎಂಬ ಬಗ್ಗೆ ಕುತೂಹಲವಂತು ಇದ್ದೇ ಇದೆ....!

 

ರವಿ ಕುಮಾರ್‌. ಎನ್‌ 
ನ್ಯೂಸ್‌ ಡೆಸ್ಕ್‌, ಬಿಗ್‌ ಬುಲೆಟಿನ್‌

By Ravikumar - 09-06-2026


Ads in Post