ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ವಿದೇಶಿ ಹೂಡಿಕೆ ಕುರಿತ ಇ.ಡಿ. ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರು ವಿದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂದು ಹೇಳುತ್ತಾರೆ. ಸತೀಶ್ ಜಾರಕಿಹೊಳಿ ಕೂಡ ಅದನ್ನೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇ.ಡಿ. ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಗಳ ಬಗ್ಗೆ ಉಲ್ಲೇಖವಿದೆಯೇ ಹೊರತು, ಯಾವ ಸಾಕ್ಷ್ಯ ಪತ್ತೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಅವರು ಪ್ರಶ್ನಿಸಿದರು.
ಇಂತಹ ಪ್ರಕರಣಗಳಲ್ಲಿ ಇ.ಡಿ. ದಾಳಿಗಳ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸುವುದು ಹೊಸದೇನಲ್ಲ. ಈ ಹಿಂದೆ 196 ದಾಳಿಗಳು ನಡೆದಿದ್ದು, ಅವುಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಇಷ್ಟೊಂದು ದಾಳಿಗಳ ಬಳಿಕವೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದೇಕೆ ಎಂದು ಪ್ರಶ್ನಿಸಿದ ಅವರು, ಕೇವಲ ಆರೋಪಗಳ ಆಧಾರದ ಮೇಲೆ ಯಾರನ್ನೂ ತಪ್ಪಿತಸ್ಥರೆಂದು ಬಿಂಬಿಸುವುದು ಸರಿಯಲ್ಲ ಎಂದರು.
ಸತೀಶ್ ಜಾರಕಿಹೊಳಿ ಅವರು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವಿದೇಶದಲ್ಲಿ ಹೂಡಿಕೆ ಮಾಡುವುದು ಕಾನೂನುಬದ್ಧವಾಗಿದ್ದರೆ ಅದರಲ್ಲಿ ತಪ್ಪೇನಿದೆ? ಕಾನೂನುಬಾಹಿರವಾಗಿ ಹೂಡಿಕೆ ಮಾಡಿದ್ದರೆ ಮಾತ್ರ ತಪ್ಪು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಕಾಂಗೋ, ಕೆನಡಾ ಸೇರಿದಂತೆ ಯಾವುದೇ ದೇಶದಲ್ಲಿ ಹೂಡಿಕೆ ಮಾಡುವುದೇ ಅಪರಾಧವಲ್ಲ. ಲಂಚದ ಹಣದಿಂದ ಹೂಡಿಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಇ.ಡಿ. ದಾಖಲೆಗಳೊಂದಿಗೆ ಸಾಕ್ಷ್ಯ ನೀಡಬೇಕು ಎಂದು ಅವರು ಆಗ್ರಹಿಸಿದರು.
PWD ಗುತ್ತಿಗೆ ನೀಡಲು ಲಂಚ ಪಡೆದ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, ಗಾಳಿ ಸುದ್ದಿಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಇ.ಡಿ. ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಹೇಳಿದರು. ತನಿಖೆ ನಡೆಸುವುದಾದರೆ ಎಲ್ಲರ ಪಾಸ್ಪೋರ್ಟ್ಗಳನ್ನು ಪರಿಶೀಲಿಸಲಿ. ಕಾಂಗ್ರೆಸ್ನವರು ತಮ್ಮ ಪಾಸ್ಪೋರ್ಟ್ ನೀಡಲು ಸಿದ್ಧರಿದ್ದೇವೆ, ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರು ಕೂಡ ದುಬೈ, ಮಾರಿಷಸ್ ಸೇರಿದಂತೆ ವಿದೇಶಗಳಿಗೆ ಎಷ್ಟು ಬಾರಿ ತೆರಳಿದ್ದಾರೆ ಎಂಬ ಮಾಹಿತಿಯನ್ನು ನೀಡಲಿ ಎಂದು ಸವಾಲು ಹಾಕಿದರು.
ಇದೇ ವೇಳೆ, ರಾಜ್ಯದ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ವಿರುದ್ಧ ಬಿಜೆಪಿ ಮಾಡಿದ್ದ ಹಿಂದಿನ ಆರೋಪಗಳನ್ನು ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದರು. ಆ ಆರೋಪಗಳ ವಿಚಾರದಲ್ಲಿ ನ್ಯಾಯಾಲಯದಲ್ಲಿ ಏನಾಯಿತು, ಆರೋಪಗಳು ಸಾಬೀತಾದವೆಯೇ ಎಂಬುದನ್ನು ಬಿಜೆಪಿಯವರು ನೆನಪಿಸಿಕೊಳ್ಳಬೇಕು ಎಂದರು. ಅಲ್ಲದೆ, ಒಮ್ಮೆ ತೀವ್ರ ಭ್ರಷ್ಟರೆಂದು ಆರೋಪಿಸಿದ್ದ ರಾಜಕಾರಣಿಗಳು ಬಿಜೆಪಿ ಸೇರಿದ ಬಳಿಕ ‘ಗಂಗಾಜಲದಿಂದ ಪವಿತ್ರರಾದಂತೆ’ ವರ್ತಿಸುತ್ತಾರೆ ಎಂದು ವ್ಯಂಗ್ಯವಾಡಿದರು.