Search


ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭೇಟಿಯಾದ ಮೋದಿ; ಅಮೇರಿಕಾಗೆ ಉರಿಯಲ್ವಾ!

ಬಿಷ್ಕೆಕ್: ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿ ಮಾಡಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿ, ವ್ಯಾಪಾರ ಸಹಕಾರ ಹಾಗೂ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಯಿತು.

ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಈ ಭೇಟಿಯಲ್ಲಿ, ಇರಾನ್‌ನೊಂದಿಗೆ ಭಾರತದ ದೀರ್ಘಕಾಲದ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಇರಾನ್‌ನೊಂದಿಗೆ ಮುಂಬರುವ ದಿನಗಳಲ್ಲಿ ವ್ಯಾಪಾರವನ್ನು ವಿಸ್ತರಿಸುವ ಹಾಗೂ ವೈವಿಧ್ಯಗೊಳಿಸುವ ಉದ್ದೇಶ ಹೊಂದಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಇದೇ ವೇಳೆ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಗುರಿಯೊಂದಿಗೆ ನಡೆಯುವ ಎಲ್ಲ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.

ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಜೊತೆಗೆ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸಿದರು. ಪ್ರಾದೇಶಿಕ ಸಮಸ್ಯೆಗಳನ್ನು ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಪರಿಹರಿಸಬೇಕು ಎಂಬ ಭಾರತದ ಸ್ಥಿರ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದ್ದು, ಸಮುದ್ರ ಸಂಚಾರ ಹಾಗೂ ವಾಣಿಜ್ಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ.

ಅರ್ಮೇನಿಯಾ ಪ್ರಧಾನಿ ಜೊತೆಗೂ ಮೋದಿ ಭೇಟಿ

SCO ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅರ್ಮೇನಿಯಾ ಪ್ರಧಾನಿ ನಿಕೋಲ್ ಪಶಿನ್ಯಾನ್ ಅವರೊಂದಿಗೂ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಡೆಸಿದರು. ಭೇಟಿಯ ಕುರಿತು ಪ್ರತಿಕ್ರಿಯಿಸಿದ ಮೋದಿ, ರಕ್ಷಣಾ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ ಮತ್ತು ಔಷಧ ಕ್ಷೇತ್ರ ಸೇರಿದಂತೆ ಹಲವು ವಲಯಗಳಲ್ಲಿ ಭಾರತ-ಅರ್ಮೇನಿಯಾ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಅವಕಾಶಗಳಿವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿರುವುದಾಗಿಯೂ ಪ್ರಧಾನಿ ಮೋದಿ ಹೇಳಿದ್ದಾರೆ.

By Ravikumar - 31-08-2026


Ads in Post