ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಸೇರಿಸಲಾಗಿದೆ ಎಂಬ ಆರೋಪದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೋದಲ್ಲಿರುವ ಕಲಿಕಾ ಪುಸ್ತಕದ ಒಂದು ಪುಟಕ್ಕೆ ‘ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಗಳು ಮತ್ತು ಘೋಷಣೆಗಳು’ ಎಂಬ ಶೀರ್ಷಿಕೆ ನೀಡಲಾಗಿದ್ದು, ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಗಳ ಜೊತೆಗೆ ಮೋದಿ ಅವರ ಕೆಲವು ರಾಜಕೀಯ ಘೋಷಣೆಗಳೂ ಕಾಣಿಸಿಕೊಂಡಿವೆ.
ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕರಾಗಿರುವ ‘ಶಿವಂತ್ ಸರ್’ಗೆ ಸಂಬಂಧಿಸಿದೆ ಎನ್ನಲಾಗಿದೆ. ಪಟ್ಟಿಯಲ್ಲಿ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಅವರಂತಹ ನಾಯಕರ ಹೆಸರುಗಳೊಂದಿಗೆ ‘ಮೈ ಭೀ ಚೌಕಿದಾರ್’ ಸೇರಿದಂತೆ ನರೇಂದ್ರ ಮೋದಿ ಅವರ ರಾಜಕೀಯ ಘೋಷಣೆಗಳು ಉಲ್ಲೇಖವಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಇಂತಹ ವಿಷಯಗಳ ಮೂಲಕ ಮಕ್ಕಳ ಮತ್ತು ಯುವಕರಲ್ಲಿ ‘ಬ್ರೈನ್ವಾಶ್’ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕೆಲ ನೆಟ್ಟಿಗರು ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು 1950ರ ಸೆಪ್ಟೆಂಬರ್ 17ರಂದು ಜನಿಸಿದ್ದು, ಭಾರತವು 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದಿತ್ತು ಎಂಬ ಅಂಶವನ್ನು ಹಲವರು ಮುಂದಿಟ್ಟಿದ್ದಾರೆ. ಅಂದರೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೂರು ವರ್ಷಗಳ ಬಳಿಕ ಮೋದಿ ಜನಿಸಿದ್ದರು. ಹೀಗಿರುವಾಗ ಅವರ ಹೆಸರನ್ನು ಸ್ವಾತಂತ್ರ್ಯ ಹೋರಾಟಗಾರರ ಕುರಿತ ಅಧ್ಯಾಯದಲ್ಲಿ ಸೇರಿಸಿರುವುದು ಇತಿಹಾಸವನ್ನು ತಿರುಚುವ ಅಥವಾ ಬಲವಂತವಾಗಿ ಹೆಸರು ಸೇರಿಸುವ ಪ್ರಯತ್ನ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೋಶನ್ ರೈ, ರಮೇಶ್ ಶ್ರೀವತ್ಸ ಹಾಗೂ ‘ದಿ ರೆಬೆಲ್’ ಸೇರಿದಂತೆ ಹಲವರು ಈ ವಿಷಯವನ್ನು ಟೀಕಿಸಿದ್ದಾರೆ. “ಸ್ವಾತಂತ್ರ್ಯದ ಬಳಿಕ ಜನಿಸಿದ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯೊಂದಿಗೆ ಜೋಡಿಸುವುದು ಆತಂಕಕಾರಿ ಬೆಳವಣಿಗೆ” ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಮೋದಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಸೇರಿಸಿಲ್ಲ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ವೈರಲ್ ಆಗಿರುವ ಈ ಪುಸ್ತಕದ ಪುಟ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.