ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ ಜೂನ್ 10ನೇ ತಾರೀಖಿಗೆ ವಿಶೇಷ ಸಾಧನೆಯೊಂದನ್ನ ಮಾಡುತ್ತಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಕಾಲ ಆಡಳಿತ ಮಾಡಿದ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ. ಮಾಜಿ ಪ್ರಧಾನಿ ಜವಹರ್ಲಾಲ್ ನೆಹರು ಅವರ ಈ ದಾಖಲೆಯನ್ನ ಮೋದಿ ಮುರಿಯುತ್ತಿದ್ದು, ಚುನಾವಣೆಯಲ್ಲಿ ಆಯ್ಕೆಯಾಗಿ ಅತಿ ಹೆಚ್ಚು ಕಾಲ ಪ್ರಧಾನಿಯಾದ ಹೆಗ್ಗಳಿಕೆ ಮೋದಿಗೆ ಸಿಗುತ್ತಿದೆ.
1951-52 ರ ದೇಶದ ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನ ಇದ್ದ ಮಧ್ಯಂತರ ಅವಧಿಯನ್ನು ಹೊರತುಪಡಿಸಿ, ಕೇವಲ ಚುನಾಯಿತ ಸರ್ಕಾರದ ದಿನಗಳನ್ನು ಲೆಕ್ಕ ಹಾಕಿದಾಗ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ದಿಗಜ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸುದೀರ್ಘ ದಾಖಲೆಯನ್ನು ಮುರಿಯಲಿದ್ದಾರೆ. 2014 ರ ಮೇ 26 ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, 2026 ರ ಜೂನ್ 10ರ ವೇಳೆಗೆ ಸತತವಾಗಿ 4,399 ದಿನಗಳ ಕಾಲ ಅಧಿಕಾರ ಪೂರೈಸಿದಂತಾಗುತ್ತದೆ.
ಜವಾಹರಲಾಲ್ ನೆಹರು ಅವರು ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಅಂದರೆ, 1952 ರ ಮೇ 13 ರಿಂದ 1964 ರ ಮೇ 27ರಂದು ನಿಧನರಾಗುವವರೆಗೂ ಚುನಾಯಿತ ಪ್ರಧಾನಿಯಾಗಿ ಒಟ್ಟು 4,398ದಿನಗಳ ಕಾಲ ಸೇವೆ ಸಲ್ಲಿಸಿದ್ದು ಎರಡನೇ ಸ್ಥಾನ ಪಡೆಯಲಿದ್ದಾರೆ. ಇದೇ ಪಟ್ಟಿಯಲ್ಲಿ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರು4077 ದಿನಗಳ ಕಾಲ (1966 ರಿಂದ 1977ರವರೆಗೆ) ಸತತ ಅಧಿಕಾರ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ.