Search


ಮೀಸಲಾತಿ ಬಗ್ಗೆ ಮೋಹನ್ ಭಾಗವತ್ ಖಡಕ್ ಮಾತು; RSS ನಿಲುವು ಸ್ಪಷ್ಟಪಡಿಸಿದ RSS ಚೀಫ್

ಮುಂಬೈ: ಮೀಸಲಾತಿ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. "ಡಾ. ಬಿ.ಆರ್. ಅಂಬೇಡ್ಕರ್ ಅವರ ಸಲಹೆಯಂತೆ ಮೀಸಲಾತಿಯನ್ನು ಜಾರಿಗೊಳಿಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಇಂಡಿಯಾ ಇಂಟರ್‌ನ್ಯಾಷನಲ್ ಮಾಡೆಲ್ ಯುನೈಟೆಡ್ ನೇಷನ್ಸ್ (IIMUN) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವೇಳೆ ಮೀಸಲಾತಿ ಕುರಿತು ಕೇಳಿದ ಪ್ರಶ್ನೆಗೆ ಭಾಗವತ್ ಉತ್ತರಿಸಿದರು. ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯ ಸಂಪೂರ್ಣವಾಗಿ ನಿರ್ಮೂಲವಾಗುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂಬ ಅಂಬೇಡ್ಕರ್ ಅವರ ದೃಷ್ಟಿಕೋನವೇ ಸರಿಯಾದ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟರು. ಮೀಸಲಾತಿ ಯಾವುದೇ ರಾಜಕೀಯ ಅನುಕೂಲಕ್ಕಾಗಿ ಜಾರಿಗೆ ಬಂದಿಲ್ಲ. ಸಮಾಜದಲ್ಲಿ ಶತಮಾನಗಳಿಂದ ಹಿಂದುಳಿದ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಅದನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ, ಮೀಸಲಾತಿಯ ಪ್ರಯೋಜನ ಪಡೆದು ಈಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ಥಿರವಾಗಿರುವವರು ಸ್ವಯಂಪ್ರೇರಣೆಯಿಂದ ಅವಕಾಶಗಳನ್ನು ಇತರ ಅಗತ್ಯವಿರುವವರಿಗೆ ಬಿಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮೀಸಲಾತಿ ಕುರಿತ ಭಾಗವತ್ ಅವರ ಈ ಹೇಳಿಕೆ ದೇಶದಾದ್ಯಂತ ಹೊಸ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುವ ಸಾಧ್ಯತೆ ಇದೆ.

By Ravikumar - 07-08-2026


Ads in Post