Search


ಪ್ರಜ್ವಲ್‌ ರೇವಣ್ಣ ಬಳಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ 100ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ..!

ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಬಹಿರಂಗವಾಗಿದೆ. ಎಫ್‌ಎಸ್‌ಎಲ್‌ ವರದಿಯಲ್ಲಿ, ಜೈಲಿನ ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳು ಪತ್ತೆಯಾಗಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ತನಿಖೆಯ ವೇಳೆ, ಕೈದಿಗಳ ಬ್ಯಾರಕ್‌ನಲ್ಲಿ ಅಳವಡಿಸಲಾಗಿದ್ದ ಟಿವಿಗೆ ಪೆನ್‌ಡ್ರೈವ್‌ ಸಂಪರ್ಕಿಸಿ ಪ್ರಜ್ವಲ್ ರೇವಣ್ಣ ವಿಡಿಯೋಗಳನ್ನು ವೀಕ್ಷಿಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜೈಲಿನೊಳಗೆ ಪೆನ್‌ಡ್ರೈವ್‌ ಬಳಕೆ ಹೇಗೆ ನಡೆಯಿತು ಮತ್ತು ಅದನ್ನು ಯಾವ ಸಂದರ್ಭದಲ್ಲಿ ಬಳಸಲಾಗಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಪೆನ್‌ಡ್ರೈವ್ ಹಾಗೂ ಮೊಬೈಲ್‌ನಲ್ಲಿದ್ದ ಒಟ್ಟು 173 ಫೈಲ್‌ಗಳನ್ನು ಎಫ್‌ಎಸ್‌ಎಲ್‌ ಪರಿಶೀಲಿಸಿದೆ. ಈ ಪೈಕಿ ಮೊಬೈಲ್‌ನಲ್ಲಿ ಚಲನಚಿತ್ರಗಳು ಮತ್ತು ವೆಬ್‌ ಸೀರೀಸ್‌ಗಳಿಗೆ ಸಂಬಂಧಿಸಿದ ಫೈಲ್‌ಗಳು ಮಾತ್ರ ಪತ್ತೆಯಾಗಿವೆ. ಆದರೆ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಪೆನ್‌ಡ್ರೈವ್‌ ಅನ್ನು ನಿಖರವಾಗಿ ಯಾವ ಸಮಯದಲ್ಲಿ ಬಳಸಲಾಗಿತ್ತು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮತ್ತೊಮ್ಮೆ ಎಫ್‌ಎಸ್‌ಎಲ್‌ ತಜ್ಞರ ನೆರವು ಕೋರಿದ್ದಾರೆ. ಪೆನ್‌ಡ್ರೈವ್‌ನ ಬಳಕೆಯ ಅವಧಿ ಹಾಗೂ ಅದರಲ್ಲಿರುವ ಡೇಟಾದ ಕುರಿತು ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಕಳೆದ ತಿಂಗಳು ಆಗಸ್ಟ್‌ 11ರಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ದಿಢೀರ್‌ ತಪಾಸಣೆ ವೇಳೆ, ಪ್ರಜ್ವಲ್ ರೇವಣ್ಣ ಅವರ ಸಹಕೈದಿ ಪ್ರತಾಪ್‌ ರಾಯ್‌ ಅವರ ಸೆಲ್‌ನಲ್ಲಿ ಮೊಬೈಲ್‌ ಫೋನ್‌ ಮತ್ತು ಪೆನ್‌ಡ್ರೈವ್‌ ಪತ್ತೆಯಾಗಿದ್ದವು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಪ್ತಿ ಮಾಡಿದ್ದ ಎಲೆಕ್ಟ್ರಾನಿಕ್‌ ಸಾಧನಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿತ್ತು.

By Ravikumar - 12-09-2026


Ads in Post